ಮೈಸೂರು

ಅಂಬೇಡ್ಕರ್‍ರ ಕಾರ್ಮಿಕ ಸುಧಾರಣೆಗಳನ್ನು ಬೇರೆ ಯಾರೂ ಮಾಡಿಲ್ಲ: ಮಹದೇವಪ್ಪ

ಮೈಸೂರು, ಮೇ 27:-  ಡಾ. ಬಿ.ಆರ್.ಅಂಬೇಡ್ಕರ್ ಅವರು ಭಾರತದಲ್ಲಿ ಮಾಡಿದ ಕಾರ್ಮಿಕ ಸುಧಾರಣೆಗಳು ಜಗತ್ತಿನ ಬೇರೆ ದೇಶಗಳಲ್ಲಿ ಯಾರೂ ಮಾಡಿಲ್ಲ ಎಂದು ಲೋಕೋಪಯೋಗಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅಭಿಪ್ರಾಯಪಟ್ಟರು.
ಶನಿವಾರ ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಕಾರ್ಮಿಕರು ಮತ್ತು ಮಾಲೀಕರ ನಡುವೆ ಸಮನ್ವಯ ಇರಬೇಕು. ಕಾರ್ಖಾನೆಯ ಲಾಭಾಂಶದ ಭಾಗವನ್ನು ಕಾರ್ಮಿಕರ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಮೀಸಲಿಡಬೇಕು. ಉದ್ಯಮಗಳ ಸಾಮಾಜಿಕ ಜವಾಬ್ದಾರಿಯನ್ನು ತೋರಿಸಬೇಕು ಎಂದರು.
ಕಾರ್ಮಿಕರಲ್ಲಿ ಸಂಘಟಿತರು ಹಾಗೂ ಅಸಂಘಟಿತರು ಇದ್ದಾರೆ. ಕೃಷಿ ಕಾರ್ಮಿಕರು ಅಸಂಘಟಿತರಾಗಿದ್ದಾರೆ. ಎಲ್ಲರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ಇರಬೇಕೆಂದು ರಾಜ್ಯಾಂಗದ ಆಶಯವಾಗಿದೆ. ಅದರ ತತ್ವದ ಕೆಳಗೆ ನಾವು ಕೆಲಸ ಮಾಡಬೇಕು ಎಂದರು.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಸಂಸ್ಥೆ, ಕಚ್ಚಾ ವಸ್ತುಗಳ ಲಭ್ಯತೆಗೆ ಅನುಗುಣವಾಗಿ ಕಾಲಕಾಲಕ್ಕೆ ಹೆಸರನ್ನು ಮರುನಾಮಕರಣ ಮಾಡಿಕೊಂಡು ಬಂದಿದೆ. 28 ದೇಶಗಳಿಗೆ ಅಳಿಸಲಾಗದ ಶಾಯಿ ಪೂರೈಸುವ ಹೆಗ್ಗಳಿಕೆ ಇರುವ ಈ ಸಂಸ್ಥೆಯ ಕಾರ್ಮಿಕರ ನೈಪುಣ್ಯ ಮೆಚ್ಚಬೇಕು ಎಂದರು.
ಸರ್ಕಾರಿ ಒಡೆತನದ ಸಂಸ್ಥೆಯಾಗಿದ್ದು, 20 ವರ್ಷಗಳಿಂದ ಲಾಭದಲ್ಲಿದೆ. ದೇಶದ ಒಳಗೆ ಹಾಗೂ ಹೊರಗೆ ಖ್ಯಾತಿ ಪಡೆದಿದೆ. ಅತ್ಯುತ್ತಮ ರಫ್ತುದಾರ ಪ್ರಶಸ್ತಿ, ಅತ್ಯುತ್ತಮ ತೆರಿಗೆ ಪಾವತಿದಾರ ಪ್ರಶಸ್ತಿ ಹಾಗೂ ಮುಖ್ಯಮಂತ್ರಿ ವಾರ್ಷಿಕ ರತ್ನ ಪ್ರಶಸ್ತಿ ಇವೆಲ್ಲವೂ ಈ ಸಂಸ್ಥೆಯ ಕಾರ್ಮಿಕರ ಬದ್ಧತೆ ಹಾಗೂ ಪರಿಶ್ರಮವನ್ನು ತಿಳಿಸುತ್ತವೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಪೇಯಿಂಟ್ ಮತ್ತು ವಾರ್ನಿಷ್ ಸಂಸ್ಥೆ ಅಧ್ಯಕ್ಷ ಹೆಚ್.ಎ.ವೆಂಕಟೇಶ್, ನಗರ ಪೋಲೀಸ್ ಆಯುಕ್ತ ಡಾ. ಎ. ಸುಬ್ರಮಣ್ಯೇಶ್ವರ ರಾವ್, ರಾಜ್ಯ ಮಾಹಿತಿ ಆಯುಕ್ತ ಕೆ.ಎಂ. ಚಂದ್ರೇಗೌಡ, ಜೆ.ಕೆ. ಟೈರ್ಸ್ ಅಂಡ್ ಇಂಡಸ್ಟ್ರೀಸ್ ಉಪಾಧ್ಯಕ್ಷ ಉಮೇಶ್ ಕೆ. ಶೆಣೈ ಮತ್ತಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ,ಎಸ್.ಎಚ್)

Leave a Reply

comments

Related Articles

error: