ಮೈಸೂರು

ಜೂ.4ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ

ಮೈಸೂರು, ಮೇ 27:-  ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಜೂ.4ರಂದು ಆಯೋಜಿಸಲಾಗಿದ್ದು, ಗೀತಗಾಯನ, ನಾಟಕ, ಮೆರವಣಿಗೆ, ಸಾಕ್ಷ್ಯಚಿತ್ರ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಕೆ.ಆರ್.ವೃತ್ತದಲ್ಲಿ ನಾಲ್ವಡಿಯವರ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ನೆರವೇರಿಸಲಾಗುತ್ತದೆ. ಸಂಜೆ 4 ಗಂಟೆಗೆ ಶ್ರೀ ಪ್ರಸನ್ನ ಲಕ್ಷ್ಮೀರಮಣಸ್ವಾಮಿ ದೇವಸ್ಥಾನದಿಂದ ಕಲಾಮಂದಿರದವರೆಗೆ ಮೆರವಣಿಗೆ, ಸಂಜೆ 5 ಗಂಟೆಗೆ ಗೀತಗಾಯನ ಹಾಗೂ ಸಭಾ ಕಾರ್ಯಕ್ರಮದ ನಂತರ ಪ್ರಜಾ ರಾಜ ನಾಟಕ ಏರ್ಪಡಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಪ್ರಚಾರದ ಉದ್ದೇಶದಿಂದ ಮುಂಚಿತವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ನಾಲ್ವಡಿ ಕೃಷ್ಣರಾಜರ ಸಾಕ್ಷ್ಯಚಿತ್ರ ಪ್ರದರ್ಶಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚಿಕ್ಕ ಗಡಿಯಾರದ ಬಳಿ ಗೀತೆಗಳನ್ನು ಹಾಡಿಸಲಾಗುವುದು ಎಂದು ಹೇಳಿದರು.
ರಾಜರ್ಷಿ ನಾಲ್ವಡಿಯವರ 1 ಸಾವಿರ ಪುಸ್ತಕಗಳನ್ನು ಮುದ್ರಿಸಿ ಕಾರ್ಯಕ್ರಮದಲ್ಲಿ ಉಚಿತವಾಗಿ ವಿತರಿಸಲಾಗುವುದು. ಪ್ರತಿಯೊಂದು ಸಂಘ ಸಂಸ್ಥೆಯಿಂದ 25 ಜನರನ್ನು ಕಾರ್ಯಕ್ರಮಕ್ಕೆ ಕರೆತರಲಾಗುವುದು. ಮುಖ್ಯ ಭಾಷಣಕಾರರಾಗಿ ಬನ್ನೂರು ಕೆ.ರಾಜು ಅವರನ್ನು ಆಹ್ವಾನಿಸಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ, ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು. (ವರದಿ: ಬಿ.ಎಂ,ಎಸ್.ಎಚ್)

Leave a Reply

comments

Related Articles

error: