ಮೈಸೂರು

ಸರಳವಾಗಿ ಎಲ್ಲರ ಮನಮುಟ್ಟುವಂಥ ಭಾಷೆಯ ಶಕ್ತಿ ರಂಗಭೂಮಿ : ಮಂಡ್ಯ ರಮೇಶ್

ಮೈಸೂರು(ಬೈಲಕುಪ್ಪೆ)ಮೇ.27:-  :  ಅತ್ಯಂತ ಸರಳವಾಗಿ ಎಲ್ಲರ ಮನ ಮುಟ್ಟಬಲ್ಲ ಭಾಷೆಯ ಶಕ್ತಿ ರಂಗಭೂಮಿ ಎಂದು ರಂಗಭೂಮಿ ಕಲಾವಿದ ಹಾಗೂ ಹಿರಿತೆರೆ ಕಿರುತೆರೆ ನಟ ಮಂಡ್ಯ ರಮೇಶ್ ತಿಳಿಸಿದರು.

ಪಟ್ಟಣದ ಸಾಯಿ ಸಮುದಾಯ ಭವನದಲ್ಲಿ ಕರ್ನಾಟಕ ಗ್ರೀನ್‍ಕಿಡ್ಸ್ ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ನಡೆದ 4ನೇ ವರ್ಷದ ಬೇಸಿಗೆಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಯಾವುದೇ ಭಾಷೆಗೂ ಸಹ ಅರ್ಥೈಸುವ ಶಕ್ತಿ ರಂಗಭೂಮಿ ಹೊಂದಿದ್ದು, ಮಕ್ಕಳಿಗೆ ವಿದ್ಯಾರ್ಥಿ ದೆಸೆಯಿಂದಲೇ ಯಾವುದೇ ಜಾತಿಯ ಸೋಂಕು ಬೀಳದಂತೆ ನಾಡಿನ ಮಹನೀಯರು ರಚಿಸಿರುವ ಆಧುನಿಕ ಪ್ರಜ್ಞಾ ನಾಟಕ ಹಾಗೂ ಕಂಸಾಳೆ, ಸುಗ್ಗಿ ಕುಣಿತ, ವೀರಗಾಸೆ ಸೇರಿದಂತೆ ಮತ್ತಿತರ ಉತ್ತಮ ಸಾಂಸ್ಕೃತಿಕ ಕಥೆಯನ್ನು ಬೆಳೆಸುವಂತಾಗಬೇಕು ಎಂದರು. ಕನ್ನಡ ಭಾಷೆಯನ್ನು ವಿವಿಧ ರೀತಿಯಲ್ಲಿ ವಿಸ್ತರಿಸುವಂತಾಗಬೇಕು ಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ ಸಾಂಸ್ಕೃತಿಕ ಚಟುವಟಿಕೆಯ ತರಬೇತಿಯನ್ನು ಕೊಡಬೇಕು, ಅಲ್ಲದೆ ಮೈಸೂರಿನಲ್ಲಿ ನಟನಾ ರಂಗಶಾಲೆಯನ್ನು ಪ್ರಾರಂಭಿಸುತ್ತಿದ್ದು, 1 ವರ್ಷದಲ್ಲಿ ಅಭಿನಯ ಮತ್ತು ರಂಗ ತರಬೇತಿಯನ್ನು ಗುಬ್ಬಿ ಕಂಪನಿಯ ಮಾದರಿಯಲ್ಲಿ ನೀಡಲಾಗುತ್ತಿದೆ. ಒಟ್ಟು 300 ವಿದ್ಯಾರ್ಥಿಗಳನ್ನು ಹೊಂದಿದ್ದು, ಇವರಲ್ಲಿ 100 ಮಂದಿ ಕಡುಬಡತನದ ವಿದ್ಯಾರ್ಥಿಗಳಾಗಿರುವುದರಿಂದ ಇವರಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದರು.

ಪತ್ರಿಕೋದ್ಯಮಿ ರವಿಕೋಟಿ ಮಾತನಾಡಿ ಬೇಸಿಗೆ ಶಿಬಿರವು ಶಾಲಾ ರಜಾದಿನದಲ್ಲಿ ಮಕ್ಕಳಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಬಹಿರಂಗ ಪಡಿಸಿಕೊಳ್ಳಲು ಅವಕಾಶ ದೊರಕಿಸಿಕೊಡುವಂತಾಗಿದ್ದು, ತರಬೇತಿ ಪಡೆಯಲು ಅನುಕೂಲವಾಗಲಿದೆ. ಈ ದೆಸೆಯಲ್ಲಿ ಪಿರಿಯಾಪಟ್ಟಣ ಕರ್ನಾಟಕ ಗ್ರೀನ್‍ಕಿಡ್ಸ್ ಡಾನ್ಸ್ ಸ್ಕೂಲ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಿರುತೆರೆ ನಟಿ ಮೀನಾಕ್ಷಿ ಡಾನ್ಸ್ ಸ್ಕೂಲ್ ಗೌರವಾದ್ಯಕ್ಷ ಬಿ.ಜೆ.ವಿಜಯ್‍ಕುಮಾರ್, ತಾ.ಪಂ.ಅಧ್ಯಕೆ ನಿರೂಪರಾಜೇಶ್, ತಾ.ಸಮಗ್ರ ಸುಸ್ಥಿರ ಸಮಿತಿ ಅಧ್ಯಕ್ಷ ಕೆ.ಎನ್.ಸೋಮಶೇಖರ್, ತಾ.ಕಸಾಪ ಅಧ್ಯಕ್ಷ ಬಿ.ಎಂ.ಶಿವಸ್ವಾಮಿ, ಜೀ. ಟಿ.ವಿ. ಡ್ರಾಮ ಜೂನಿಯರ್ಸ್ ಖ್ಯಾತಿಯ ಬಾಲ ನಟ ಮಾಸ್ಟರ್ ಅಚಿಂತ್ಯ, ದಸಂಸ ಮುಖಂಡ ಅಣ್ಣಯ್ಯ, ಅಂತಾರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಅನಿಲ್‍ಕುಮಾರ್ ತಾ.ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಶಿವಯೋಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶ್ವೇತಾ, ಗ್ರೀನ್‍ಕಿಡ್ಸ್ ಡಾನ್ಸ್ ಸ್ಕೂಲ್ ಟ್ರಸ್ಟ್ ಅಧ್ಯಕ್ಷ ಅಂಬಾರಿ ಪರಮೇಶ್, ಉಪಾಧ್ಯಕ್ಷ ಬಿ.ಸಿ.ತಮ್ಮಣ್ಣೇಗೌಡ, ಖಜಾಂಜಿ ಬಿ.ರವಿ, ಸಹಕಾರ್ಯದರ್ಶಿ ಅನುಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.  (ವರದಿ:ಆರ್.ಬಿ.ಆರ್,ಎಸ್.ಎಚ್)

Leave a Reply

comments

Related Articles

error: