ಪ್ರಮುಖ ಸುದ್ದಿಮೈಸೂರು

ಮನೆಯ ಮುಂದೆ ಶವವಿರಿಸಿಕೊಳ್ಳಲು ಬಿಡದ ಮಾಲಕಿ : ಸಾವಿಗೂ ಕರಗದ ಕಲ್ಲು ಹೃದಯ

ಮೈಸೂರು,ಮೇ.28:- ಎದೆಯೆತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ತಂದೆಗೆ ಭೋಗ್ಯಕ್ಕಿದ್ದ ಮನೆಯ ಮಾಲಕರು ಮನೆಯ ಮುಂದೆ ಶವವಿರಿಸಿಕೊಳ್ಳಬೇಡಿ ಮತ್ತೆಲ್ಲಾದರೂ ಕೊಂಡೊಯ್ಯಿರಿ ಎಂದು ಕಠೋರವಾಗಿ ನುಡಿದ ಕಾರಣ ರಾತ್ರಿ ಧೋ ಎಂದು ಸುರಿಯುತ್ತಿದ್ದ ಮಳೆಯಲ್ಲಿಯೇ ಛತ್ರಿಯನ್ನು ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಮಗನ ಶವವನ್ನಿರಿಸಿ ಕಾದು ಕುಳಿತ ಹೃದಯವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.

ಕನಕಗಿರಿಯ ಮುನೇಶ್ವರ ನಗರದ ನಿವಾಸಿ ಮಹೇಶ್(40) ಮೃತಪಟ್ಟ ಯುವಕ. ಈತ ವೃತ್ತಿಯಲ್ಲಿ ಪೇಂಟರ್ ಆಗಿದ್ದು, ಮದ್ಯವ್ಯಸನಿಯಾಗಿದ್ದ. ಈತನ ಆರೋಗ್ಯ ಸರಿಯಿಲ್ಲದ ಕಾರಣ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಬಳಿಕ ಮಹೇಶ್ ಶನಿವಾರ ಮಧ್ಯಾಹ್ನ ಮತ್ತೆ ವಿಪರೀತ ಮದ್ಯ ಸೇವಿಸಿ ಬಂದು ಕನಕಗಿರಿ ಹತ್ತಿರ ಇರುವ ರಾಜಕಾಲುವೆಯಲ್ಲಿ ಬಿದ್ದಿದ್ದ. ಇದನ್ನು ನೋಡಿದ ಸಾರ್ವಜನಿಕರು ವಿದ್ಯಾರಣ್ಯಪುರಂ ಪೊಲೀಸರಿಗೆ ವಿಷಯ ಮುಟ್ಟಿಸಿದರು. ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಮಹೇಶ್ ನನ್ನು ಆತನ ಮನೆಯ ಬಳಿ ಬಿಟ್ಟಿದ್ದರು. ಆದರೆ ಅಷ್ಟರಲ್ಲಾಗಲೇ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಮಹೇಶ್ ತಂದೆ ವೀರಭದ್ರಪ್ಪನವರಿಗೆ ಸ್ವಂತ ಮನೆಯಿಲ್ಲದ ಕಾರಣ ಮನೆಯೊಂದನ್ನು ಭೋಗ್ಯಕ್ಕೆ ಹಾಕಿಕೊಂಡಿದ್ದರು. ಮಹೇಶ್ ನ ಮೃತ ಶರೀರವನ್ನು ಮನೆಯ ಮುಂದೆ ಇರಿಸಿ ಕುಳಿತುಕೊಂಡಾಗ ಮನೆಯ ಮಾಲಕಿ ದಾಕ್ಷಾಯಿಣಿ ಎಂಬವರು ನಿರಾಕರಿಸಿ, ಬೇರೆಲ್ಲಾದರೂ ಕೊಂಡೊಯ್ಯಿರಿ ಎಂದು ತಿಳಿಸಿದರು.  ಒಂದು ಕಡೆ ಮಗನನ್ನು ಕಳೆದುಕೊಂಡ ದು:ಖವಾದರೆ ಮಧ್ಯಾಹ್ನದವರೆಗೆ ಮಗನ ಮೃತ ಶರೀರವನ್ನು ಎಲ್ಲಿ ಇರಿಸಿಕೊಳ್ಳಲಿ ಎಂಬ ಚಿಂತೆ ಕಾಡಿತು. ವೀರಭದ್ರಪ್ಪ ಸಾರ್ವಜನಿಕ ಸ್ಥಳವೊಂದರಲ್ಲಿ  ಮಗನ ಶವವನ್ನಿರಿಸಿ ಸುರಿಯುವ ಮಳೆಯಲ್ಲಿ ಛತ್ರಿ ಹಿಡಿದು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಸಾರ್ವಜನಿಕರು ಮತ್ತು ಸಂಬಂಧಿಕರು ಬಂದು ವೀರಭದ್ರಪ್ಪನ ಸಹಾಯಕ್ಕೆ ನಿಂತಿದ್ದಾರೆ. ಆದರೆ ಸಾವಿಗೂ ಕರಗದ ಕಲ್ಲು ಹೃದಯ ಇಲ್ಲಿದೆಯಾ ಎಂಬ ಪ್ರಶ್ನೆಯೀಗ ಸಾರ್ವಜನಿಕರನ್ನು ಕಾಡುತ್ತಿದೆ. (ವರದಿ:ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: