ಪ್ರಮುಖ ಸುದ್ದಿಮೈಸೂರು

ಗೋಹತ್ಯೆ ನಿಷೇಧ ಕಾಯ್ದೆ ಪುನರ್ ಪರಿಶೀಲಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು: ಸಚಿವ ಎ.ಮಂಜು

ಮೈಸೂರು,ಮೇ.28:- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಕಾಯ್ದೆಯಿಂದ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದ್ದು ಕೇಂದ್ರಕ್ಕೆ ಪತ್ರ ಬರೆದು ಆದೇಶವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಲಾಗುವುದು ಎಂದು ಪಶುಸಂಗೋಪನೆ ಸಚಿವ ಎ.ಮಂಜು ತಿಳಿಸಿದರು.
ಭಾನುವಾರ ನಗರದ ಜಲದರ್ಶಿನಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಗೋ ಹತ್ಯೆಯನ್ನು ನಿಷೇಧಿಸುವ ಸಲುವಾಗಿ ಜಾರಿಗೆ ತಂದಿರುವ ಕಾಯ್ದೆ ರೈತಾಪಿ ವರ್ಗಕ್ಕೆ ಮಾರಕವಾಗಿದೆ. ಇದರಿಂದ ರೈತರಿಗೆ ಯಾವುದೇ ರೀತಿಯ ಅನುಕೂಲವಾಗುವುದಿಲ್ಲ. ಜಾನುವಾರುಗಳನ್ನು ಮಾರಾಟ ಮಾಡುವವರಲ್ಲಿ ಶೇ.90ರಷ್ಟು ರೈತರೇ ಆಗಿದ್ದಾರೆ. ರೈತರು ತಮ್ಮ ಜಾನುವಾರುಗಳು ಉಪಯೋಗಕ್ಕೆ ಬಾರದೇ ಇದ್ದಾಗ ಮಾತ್ರ ಮಾರಾಟ ಮಾಡುತ್ತಾರೆ. ಸಂತೆಯಲ್ಲಿ  ಮಾರಾಟ ಮಾಡುವವರು ಮತ್ತು ಕೊಳ್ಳುವವರಿಗೆ ಪರವಾನಗಿ ಇರಬೇಕು ಎಂದು ಕಾಯ್ದೆಯಲ್ಲಿ ತಿಳಿಸಿದ್ದಾರೆ. ಇದು ಆಗದೇ ಇರುವ ಮಾತು. ಕೇಂದ್ರ 1964ರ ಕಾಯ್ದೆಯನ್ನು ಅಳವಡಿಸಿಕೊಳ್ಳದೆ ಜಾರಿಗೆ ತಂದಿರುವುದು ಗೋಹತ್ಯೆ ನಿಷೇಧವಲ್ಲ, ಬದಲಾಗಿ ಗೋ ನಿರ್ವಹಣೆ ಕಾಯ್ದೆ. ಬಿಜೆಪಿಯವರು ಭಾವನಾತ್ಮಕವಾಗಿ ಮಾತನಾಡುವ ಬದಲು ಜಾರಿಗೆ ತಂದಿರುವ ಕಾಯ್ದೆ ಕುರಿತು ಮಾತನಾಡಲಿ ಎಂದರು. ಕ್ಯಾಬಿನೆಟ್‌ನಲ್ಲಿ ಈ ವಿಷಯವನ್ನು ಚರ್ಚಿಸಿ ಆದೇಶವನ್ನು ವಾಪಸ್ ಪಡೆಯುವಂತೆ ಪತ್ರ ಬರೆಯಲಾಗುವುದು. ಸಮಯವನ್ನು ನಿಗದಿ ಮಾಡಿ ಪ್ರಧಾನಿಗಳನ್ನು ಭೇಟಿ ಮಾಡಿ ವಾಸ್ತವಾಂಶಗಳನ್ನು ತಿಳಿಸಲಾಗುವುದು ಎಂದು ಹೇಳಿದರು.
ಬಿ.ಎಸ್.ಯಡಿಯೂರಪ್ಪ ಅಧಿಕಾರಕ್ಕೆ ಬಂದ24 ಗಂಟೆಯಲ್ಲಿ ರೈತರ ಸಹಕಾರಿ ಸಂಘಗಳಲ್ಲಿನ 11 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಹೇಳಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 40ಸಾವಿರ ಕೋಟಿ ರೈತರ ಸಾಲವಿದೆ. ಇದು ಯಡಿಯೂರಪ್ಪನವರ ಕಣ್ಣಿಗೆ ಕಾಣುವುದಿಲ್ಲವೆ. ರೈತರೆಂದರೆ ಎಲ್ಲರೂ ರೈತರೆ. ಮಾಡಿದರೆ ಎಲ್ಲರ ಸಾಲವನ್ನೂ ಮನ್ನಾ ಮಾಡಬೇಕು. ಅದನ್ನು ಬಿಟ್ಟು ರಾಜಕೀಯ ಪ್ರೇರಿತ ಹೇಳಿಕೆ ನೀಡಬಾರದು ಎಂದು ಹೇಳಿದರು. (ವರದಿ ಬಿ.ಎಂ,ಎಸ್.ಎಚ್)

Leave a Reply

comments

Related Articles

error: