ಮೈಸೂರು

ಪಾರಂಪರಿಕ ಮೌಲ್ಯಕ್ಕೆ ಹಾನಿಯಾಗದಂತೆ ದೇವರಾಜ ಮಾರುಕಟ್ಟೆ ಪುನರ್ ನಿರ್ಮಿಸಲಾಗುವುದು: ಭೈರಪ್ಪ

page1leadರಾಜ್ಯ ಟಾಸ್ಕ್ ಫೋರ್ಸ್ ದೇವರಾಜ ಮಾರುಕಟ್ಟೆಯ ಭದ್ರತೆ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದು, ಕಟ್ಟಡವನ್ನು ಪುನರ್ ನಿರ್ಮಾಣ ಮಾಡುವಂತೆ ವರದಿ ನೀಡಿದೆ. ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಹಾಳಾಗಿದ್ದು, ನವೀಕರಣ ಸಮಯದಲ್ಲಿ ಗೋಡೆಗಳೆಲ್ಲವೂ ಬಿರುಕು ಬಿಟ್ಟಿವೆ. ನೂರಾರು ವರ್ಷಗಳ ಕಟ್ಟಡವಾದ್ದರಿಂದ ಅಡಿಪಾಯ ಭದ್ರವಾಗಿಲ್ಲ. ಹಾಗಾಗಿ ಕಟ್ಟಡವನ್ನು ನವೀಕರಣ ಮಾಡುವ ಬದಲು ಸಂಪೂರ್ಣ ನೆಲಸಮ ಮಾಡಿ ಇದೇ ಮಾದರಿಯಲ್ಲಿ ಪುನರ್ ನಿರ್ಮಾಣ ಮಾಡುವಂತೆ ವರದಿಯಲ್ಲಿ ತಿಳಿಸಲಾಗಿದ್ದು, ಲ್ಯಾನ್ಸ್‌ಡೌನ್ ಕಟ್ಟಡವನ್ನು ಹಾಗೆಯೇ ಉಳಿಸಿಕೊಳ್ಳಲು ಶಿಫಾರಸು ಮಾಡಿದ್ದಾರೆ ಎಂದು ಮೇಯರ್ ಭೈರಪ್ಪ ತಿಳಿಸಿದರು.

ಟಾಸ್ಕ್ ಪೋರ್ಸ್ 14 ಪುಟಗಳ ವರದಿ ಹಾಗೂ ಸಂಗ್ರಹಿಸಿದ್ದ ಸ್ಯಾಂಪಲ್‌ಗಳ ವರದಿ, ಫೋಟೋಗಳನ್ನೊಳಗೊಂಡ 3೦ ಪುಟಗಳ ವರದಿ ಸಲ್ಲಿಸಿದ್ದು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ದೇವರಾಜ ಮಾರುಕಟ್ಟೆ ನವೀಕರಣಕ್ಕೆ ೯ ಕೋಟಿ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡ ನವೀಕರಣಕ್ಕೆ 3.5 ಕೋಟಿ ನೀಡಿದ್ದು ಇದರಲ್ಲಿ 2 ಕೋಟಿಗಳಷ್ಟು ಖರ್ಚಾಗಿದ್ದು, ನವೀಕರಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿದ್ದ ಮುಂಬೈ ಮೂಲದ ಕಂಪನಿಗೆ ಟೆಂಡರ್‌ನಂತೆ ಹಣ ನೀಡಲಾಗಿದೆ ಎಂದು ಹೇಳಿದರು.

ದೇಶದ ನಂ.೧ ಸ್ವಚ್ಛ ನಗರಿ ಎಂದು ಬಿರುದಾಂಕಿತವಾದ ಮೈಸೂರಿಗೆ ಬಯಲು ಶೌಚ ಮುಕ್ತ ನಗರ ಬಿರುದು ಲಭಿಸುವಲ್ಲಿ ಪೌರ ಕಾರ್ಮಿಕರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕರ ಪಾತ್ರ ತುಂಬಾ ದೊಡ್ಡದಿದ್ದು, ಇವರೆಲ್ಲರ ಒಗ್ಗಟ್ಟಿನ ಪರಿಶ್ರಮಕ್ಕೆ ಈ ಪ್ರಶಸ್ತಿ ಸಂದಿದೆ ಎಂದು ಮೇಯರ್ ಬಿ.ಎಲ್.ಭೈರಪ್ಪ ಹರ್ಷ ವ್ಯಕ್ತಪಡಿಸಿದರು.

ಮಂಗಳವಾರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈಸೂರು ಇಂದು ದೇಶದಲ್ಲಲ್ಲದೆ ವಿಶ್ವ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಸ್ವಚ್ಛತೆಯಲ್ಲಿ ಎರಡನೇ ಬಾರಿಗೆ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಪೌರಕಾರ್ಮಿಕರು. ಹಗಲಿರುಳೆನ್ನದೆ ನಗರದ ಸ್ವಚ್ಛತೆಗಾಗಿ ದುಡಿದಿದ್ದಾರೆ. ಇವರೊಂದಿಗೆ ಸಂಘ ಸಂಸ್ಥೆಗಳು ಸಹ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದು ಎಲ್ಲರ ಸಹಭಾಗಿತ್ವದಲ್ಲಿ ಇಂದು ಮೈಸೂರು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಈ ಸಂದರ್ಭದಲ್ಲಿ ಮೈಸೂರನ್ನು ಇಷ್ಟು ಸುಂದರವಾಗಿ, ದೂರದರ್ಶಿತ್ವದಿಂದ ಕಟ್ಟಿರುವ ಮಹಾರಾಜರಿಗೆ ಕೃತಜ್ಞತೆ ಸಲ್ಲಿಸಿದರು.

ಇಂಡಿಯಾ ಟುಡೆ ಸಮೀಕ್ಷೆಯ ಪ್ರಕಾರ ರಾಜ್ಯದ ಸ್ವಚ್ಛ ದೇವಸ್ಥಾನ ಪ್ರಶಸ್ತಿ ಧರ್ಮಸ್ಥಳಕ್ಕೆ, ತ್ಯಾಜ್ಯ ವಿಂಗಡನೆ ಹಾಗೂ ಮರು ಬಳಕೆಗೆ ಬೆಂಗಳೂರಿನ ಸಂಸ್ಥೆಗೆ ಪ್ರಶಸ್ತಿ ಲಭಿಸಿದ್ದು ಮೈಸೂರಿಗೆ ಬಯಲು ಶೌಚ ಮುಕ್ತ ನಗರಿ ಪ್ರಶಸ್ತಿ ಲಭಿಸಿದೆ. ಮುಂಬೈನಲ್ಲಿ ನಡೆದ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಮೈಸೂರಿನ ಬಗ್ಗೆ ಹೆಚ್ಚಿನ ಕಾಳಜಿ ಹಾಗೂ ಆತ್ಮೀಯತೆಯ ಮಾತುಗಳನ್ನಾಡಿದರು. ಇದು ನಮ್ಮ ನಗರಕ್ಕೆ ಸಂದ ಗೌರವ ಎಂದ ಅವರು, ಬಯಲು ಶೌಚ ಮುಕ್ತ ನಗರವನ್ನಾಗಿಸಲು ಇನ್ನಷ್ಟು ಶ್ರಮ ವಹಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಆಯುಕ್ತ ಜಗದೀಶ್, ಉಪಮೇಯರ್ ವನಿತಾ ಪ್ರಸನ್ನ, ಪಾಲಿಕೆ ವಿರೋಧ ಪಕ್ಷದ ನಾಯಕ ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: