ಪ್ರಮುಖ ಸುದ್ದಿ

ದೇಶ ಕಾಯುವ ವೀರ ಯೋಧರಿಗೆ ನೆರವಾಗಲಿದೆ ಸೈನಿಕ ರೋಬೋ

 

ಪ್ರಮುಖ ಸುದ್ದಿ, ಕೆ.ಆರ್.ಪೇಟೆ, ಮೇ 29: ತಾಲೂಕಿನ ಕೋಮನಹಳ್ಳಿಯ ರೈತ ವಿಜ್ಞಾನಿ ಎಂದೇ ಖ್ಯಾತರಾಗಿರುವ ರೋಬೋ ತಜ್ಞ ಮಂಜೇಗೌಡ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕೊಳವೆ ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ರೋಬೋ ಯಂತ್ರಗಳನ್ನು ಕಂಡುಹಿಡಿದು ಹೆಸರುವಾಸಿಯಾಗಿದ್ದ ಮಂಜೇಗೌಡ ಇದೀಗ ದೇಶ ಕಾಯುವ ವೀರ ಯೋಧರಿಗೆ ನೆರವು ನೀಡಬಲ್ಲ ರೋಬೋ ಆವಿಷ್ಕರಿಸಿದ್ದಾರೆ.

ತೆರೆದ ಕೊಳವೆ ಬಾವಿಗೆ ಮಕ್ಕಳು ಬಿದ್ದ ಸಂದರ್ಭದಲ್ಲಿ ಕಾಪಾಡುವ ಸಲುವಾಗಿ ರೋಬೋ ಯಂತ್ರ ಕಂಡುಹಿಡಿದಿದ್ದ ಮಂಜೇಗೌಡ ಈ ಬಾರಿ ಸೈನಿಕರ ರಕ್ಷಣೆ ಮಾಡಬಲ್ಲ ರೋಬೋ ಕಂಡುಹಿಡಿದಿದ್ದಾರೆ. ಸೈನಿಕರನ್ನು ದಾಳಿಯಿಂದ ಕಾಪಾಡುವ, ಅಪಾಯಕಾರಿ ಜಾಗದಲ್ಲಿ ಸೈನಿಕರ ಬದಲಾಗಿ ಯೋಧನಂತೆ ಕಾರ್ಯನಿರ್ವಹಿಸುವ ರೋಬೋ ಯಂತ್ರದ ಆವಿಷ್ಕಾರ ಮಾಡಿದ್ದಾರೆ. ಶತ್ರು ರಾಷ್ಟ್ರದ ಸೈನಿಕರ ಚಲನ ವಲನಗಳನ್ನು ಪತ್ತೆಹಚ್ಚಿ ಗಡಿಯೊಳಗೆ ನುಗ್ಗಿ ನಮ್ಮ ಸೈನಿಕರ ಮೇಲೆ ದಾಳಿ ನಡೆಸುವ ಶತ್ರುಗಳನ್ನು ಸಂಹಾರ ಮಾಡುವ ಶಕ್ತಿ ಹೊಂದಿರುವ ರೋಬೋ ದೇಶದ ಗಡಿಯಲ್ಲಿ ಸೈನಿಕರ ಜೀವ ಉಳಿಸುವುದಲ್ಲದೆ ದೇಶದ ರಕ್ಷಣೆಯನ್ನೂ ಮಾಡಲಿದೆ.

ಬಂದೂಕು ಹಿಡಿದಿರುವ ರೋಬೋಗೆ ಕಂಪ್ಯೂಟರ್ ಪರದೆ, ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಶತ್ರುಗಳ ಚಲನವಲನ ಕಂಪ್ಯೂಟರ್ ಪರದೆಯಲ್ಲಿ ಕಂಡು ಬಂದರೆ ತಕ್ಷಣ ಎಚ್ಚೆತ್ತುಕೊಳ್ಳುವ ರೋಬೋ ಶತ್ರುಗಳ ಮೇಲೆ ದಾಳಿ ಮಾಡುತ್ತದೆ. ಸೋಲಾರ್ ಸಿಸ್ಟಂ ಮೂಲಕ ರೋಬೋಗೆ ವಿದ್ಯುತ್ ಬಳಕೆ ಮಾಡಿಕೊಂಡು ದುರ್ಗಮ ಸ್ಥಳದಲ್ಲಿ ಹಾಗೂ ಗಡಿ ಪ್ರದೇಶಗಳಲ್ಲಿ ಕೆಲಸ ಮಾಡಿ ಶತ್ರು ಸೈನಿಕರ ಸಮಗ್ರ ಮಾಹಿತಿಯನ್ನು ಭಾರತೀಯ ಸೈನಿಕರಿಗೆ ಒದಗಿಸುವ ಮೂಲಕ ನಮ್ಮ ಸೈನ್ಯದ ಸೈನಿಕರ ಆತ್ಮಸ್ಥೈರ್ಯವನ್ನು ಹೆಚ್ಚಿಸಿ, ಸಾವು-ನೋವುಗಳನ್ನು ತಡೆಯುವ ಸಾಮರ್ಥ್ಯ ಈ ರೋಬೋ ಸೈನಿಕನಿಗಿದೆ.

ನೂತನವಾಗಿ ಆವಿಷ್ಕರಿಸಿರುವ ರೋಬೋ ಸೈನಿಕನನ್ನು ಕಂಡು  ಶಾಸಕ ನಾರಾಯಣಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.  (ವರದಿ ಬಿ.ಎಂ)

Leave a Reply

comments

Related Articles

error: