ಕರ್ನಾಟಕಪ್ರಮುಖ ಸುದ್ದಿ

ಸೇನಾ ನೇಮಕಾತಿ ರ್ಯಾಲಿ : ಸೇನಾ ಸೇವೆಗಾಗಿ ಅತಿ ಉತ್ಸಾಹದಿಂದ ಪಾಲ್ಗೊಂಡ ಯುವ ಸಮೂಹ

ರಾಜ್ಯ(ಮಡಿಕೇರಿ)ಮೇ.29:- ಸುಮಾರು ನಾಲ್ಕು ವರ್ಷಗಳ ನಂತರ ಮಡಿಕೇರಿಯಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ರ್ಯಾಲಿಯಲ್ಲಿ ಸೇನಾ ಸೇವೆಗಾಗಿ ಅತಿ ಉತ್ಸಾಹದಿಂದ ಯುವ ಸಮೂಹ ಪಾಲ್ಗೊಂಡಿದೆ. ಸುಮಾರು ಐದು ಸಾವಿರಕ್ಕೂ ಅಧಿಕ ಮಂದಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು, ಸೇನೆಯಲ್ಲಿ ಸೇವೆ ಸಲ್ಲಿಸುವುದೇ ಒಂದು ಪುಣ್ಯದ ಕೆಲಸವೆಂದು ಅರ್ಜಿದಾರರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತೀಯ ಸೇನಾ ನೇಮಕಾತಿ ರ್ಯಾಲಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸೋಮವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನಾಲ್ಕು ವರ್ಷದ ನಂತರ ನಗರದಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಯುತ್ತಿದೆ. ಕೊಡಗಿನ ಜನರು ಸೇನಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಜಿಲ್ಲೆಯಲ್ಲಿ ಸೈನಿಕ ಶಾಲೆಯು ಸಹ ಇದೆ. ಆ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಯಾಗುವಂತಾಗಬೇಕು ಎಂದರು.  ಬ್ರಿಗೇಡಿಯರ್ ಭಾಜ್ವ ಮಾತನಾಡಿ ಸೇನಾ ನೇಮಕಾತಿ ರ್ಯಾಲಿಗೆ ಸುಮಾರು 5,533 ಮಂದಿ ಯುವಕರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.  ಭಾರತೀಯ ಸೇನೆಯಲ್ಲಿ ಸೈನಿಕ ಗುಮಾಸ್ತ, ಉಗ್ರಾಣ ಪಾಲಕ(ತಾಂತ್ರಿಕ), ಸೈನಿಕ ಸಾಮಾನ್ಯ ಕರ್ತವ್ಯ, ಶುಶ್ರೂಷಕ ಸಹಾಯಕ, ಪಶುವೈದ್ಯ, ಸೈನಿಕ ಟ್ರೇಡ್‍ಮೆನ್, ಸೈನಿಕ ತಾಂತ್ರಿಕ ಹುದ್ದೆಗಳಿಗೆ ರ್ಯಾಲಿ ನಡೆಯಲಿದೆ ಎಂದು ಅವರು ತಿಳಿಸಿದರು.

ರಾಜ್ಯದ ಕೊಡಗು, ಮೈಸೂರು, ಹಾಸನ, ಚಾಮರಾಜನಗರ, ಕೋಲಾರ, ಬೆಂಗಳೂರು, ಮಂಡ್ಯ, ಬಳ್ಳಾರಿ, ರಾಮನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ದೇಹದಾರ್ಢ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಬಳಿಕ ಜುಲೈ ತಿಂಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಸೇನಾ ನೇಮಕಾತಿ ರ್ಯಾಲಿ ಆರಂಭದಲ್ಲಿ 30 ಸಾವಿರ ರೂ.ಗೂ ಹೆಚ್ಚು ವೇತನ ದೊರೆಯಲಿದೆ. ಸಿಫಾಯಿಯಿಂದ ಸುಬೇದಾರ್ ಮೇಜರ್ ವರೆಗೆ ಮತ್ತು ಸೇನೆಯ ಉನ್ನತ ಸ್ಥಾನ ಕ್ಯಾಪ್ಟನ್ ವರೆಗೆ ಗೆಜೆಟೆಡ್ ಅಧಿಕಾರಿಯಾಗಿ ಬಡ್ತಿ ಮಾಡಲಾಗುತ್ತದೆ. ರಣರಂಗ ಸೀಮಾ ಮತ್ತು ಉತ್ತುಂಗ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚುವರಿ ಭತ್ಯೆ, ವರ್ಷದಲ್ಲಿ ಒಂದು ಬಾರಿ ರೈಲಿನಲ್ಲಿ ಉಚಿತ ಪ್ರಯಾಣ, ರಜೆಯಲ್ಲಿ ಶೇ.50 ರಷ್ಟು ರಿಯಾಯಿತಿ, ಉಚಿತ ಪಡಿತರ, ವೈದ್ಯಕೀಯ ಸೌಲಭ್ಯ, ಕ್ಯಾಂಟೀನ್ ಸೌಲಭ್ಯಗಳು ದೊರೆಯಲಿವೆ.

ಲಿಖಿತ ಪರೀಕ್ಷೆಯಲ್ಲಿ ಎನ್.ಸಿ.ಸಿ. ಪ್ರಮಾಣ ಪತ್ರ ಹೊಂದಿದ್ದ ಅಭ್ಯರ್ಥಿಗಳಿಗೆ ಸೈನಿಕ ಸಾಮಾನ್ಯ ಕರ್ತವ್ಯ ಮತ್ತು ಟ್ರೇಡ್‍ಮನ್ ಎಲ್ಲಾ ವರ್ಗದವರಿಗೆ ಲಿಖಿತ ಪರೀಕ್ಷೆಯಿಂದ ವಿನಾಯಿತಿಯಿದೆ ಎಂದು ಅವರು ತಿಳಿಸಿದರು.

ಯುವಕರು ಭಾರತೀಯ ಸೇನೆ ಸೇರಲು ಉತ್ಸಾಹದಿಂದ ಪಾಲ್ಗೊಂಡರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದೇ ಪುಣ್ಯದ ಕೆಲಸ ಎಂದು ರ್ಯಾಲಿಯಲ್ಲಿ ಭಾಗವಹಿಸಿದ್ದ ಯುವಕರು ಹೇಳಿದರು. ಕರ್ನಲ್ ನವರತನ್ ಸಿಬಿಯ, ಸೈನಿಕ ಮಂಡಳಿ ಜಂಟಿ ನಿರ್ದೇಶಕರಾದ ಗೀತಾ ಇತರರು ಹಾಜರಿದ್ದರು. (ವರದಿ:ಕೆಸಿಐ,ಎಸ್.ಎಚ್)

Leave a Reply

comments

Related Articles

error: