ನಮ್ಮೂರುಮೈಸೂರು

ವಿಜ್ಞಾನ ವಿಸ್ಮಯಕ್ಕೆ ವೇದಿಕೆಯಾದ ಜಗನ್ಮೋಹನ ಅರಮನೆ..

ಸದಾ ಒಂದಿಲ್ಲೊಂದು ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಕ್ಕೆ ವೇದಿಕೆಯಾಗುತ್ತಿದ್ದ ಜಗನ್ಮೋಹನ ಅರಮನೆ ಮಂಗಳವಾರ ಹೊಸದೊಂದು ಲೋಕಕ್ಕೆ ಕೊಂಡೊಯ್ದಿತ್ತು. ಸ್ವಯಂಚಾಲಿತ ಭಾರೀ ವಾಹನ ನಿಯಂತ್ರಣ ವ್ಯವಸ್ಥೆ, ಸ್ವಯಂಚಾಲಿತ ಬೀದಿ ದೀಪಗಳ ನಿಯಂತ್ರಣ ವ್ಯವಸ್ಥೆ, ಸೋಲಾರ್ ಸಿಸ್ಟಮ್, ಗಾಳಿಯಂತ್ರ, ಸಬ್ ಮೆರಿನ್ ಸೇರಿದಂತೆ ವಿಜ್ಞಾನದ ವಿಸ್ಮಯ ಲೋಕವೇ ಸೃಷ್ಟಿಯಾಗಿತ್ತು.

ದಸರಾ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಹಾಗೂ ಶಿಕ್ಷಣ ಇಲಾಖೆ ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ಮಕ್ಕಳ ದಸರಾದ ಒಂದು ಭಾಗವಾದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಕಂಡುಬಂದ ದೃಶ್ಯಗಳಿವು. ಮೈಸೂರು ತಾಲೂಕಿನ ಸುಮಾರು ೫೦ ಶಾಲೆಗಳ ಮಕ್ಕಳು ವಿಭಿನ್ನ, ವೈವಿಧ್ಯಮಯ ಹಾಗೂ ನೂತನ ಆವಿಷ್ಕಾರಕ್ಕೆ ನಾಂದಿ ಹಾಡಬಲ್ಲ ಪರಿಕರಣಗಳನ್ನು ಪ್ರದರ್ಶಿಸಿದರು. ದೊಡ್ಡಕಾನ್ಯ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಪುರುಷೋತ್ತಮ್ ತಯಾರಿಸಿದ್ದ ಸೋಲಾರ್ ಎನರ್ಜಿ ಕಿಟ್ ವಿನೂನವಾಗಿತ್ತು. ವಿದ್ಯುತ್ ಅಭಾವವಿರುವ ಈ ಕಾಲದಲ್ಲಿ ಗೃಹ ಬಳಕೆಯ ಎಲ್ಲವನ್ನೂ ಸೋಲಾರ್ ಎನರ್ಜಿಯಿಂದಲೇ ಬಳಸಬಹುದಾದಂತಹ ವಿಧಾನ ಮೆಚ್ಚುಗೆಗೆ ಪಾತ್ರವಾಯಿತು.

ದೊಡ್ಡಕಾನ್ಯ ಶಾಲೆಯ ಪುಟ್ಟಲಕ್ಷ್ಮಿ ಒನ್ ಆಬ್ಜೆಕ್ಟ್ 11 ಇಮೇಜಸ್ ಎಂಬ ಸಿದ್ಧಾಂತದಲ್ಲಿ ತಯಾರಿಸಿದ್ದ ಕನ್ನಡಿ ಮಾದರಿ ಎಲ್ಲರನ್ನೂ ಆಕರ್ಷಿಸಿತು. ಡೀಪ್‌ವೆಲ್, ಎಲೆಕ್ಟ್ರಿಕ್ ಬೌಲರ್, ಸಬ್‌ಮೆರಿನ್ ಗಮನ ಸೆಳೆದರೆ, ನಂಜನಗೂಡಿನ ಕಸ್ತೂರ ಬಾ ಬಾಲಿಕಾ ವಿದ್ಯಾಲಯದ ಮಕ್ಕಳು ತಯಾರಿಸಿದ್ದ ಕರಕುಶಲ ವಸ್ತುಗಳು ಜನಾಕರ್ಷಣೆಗೆ ಪಾತ್ರವಾದವು.

ಮಡ್ ಡ್ರೇಜ್, ಜೆಸಿಬಿ, ರಕ್ತಪರಿಚಲನ ವ್ಯವಸ್ಥೆ, ಲೇಸರ್ ಮೈಕ್ರೋಸ್ಕೋಪ್, ವಿದ್ಯುತ್‌ನ ಸರಣಿ ಹಾಗೂ ಸಮಾನಾಂತರ ಜೋಡಣೆ ವ್ಯವಸ್ಥೆ, ಗೃಹಬಳಕೆ ವಸ್ತುಗಳ ನಿಯಂತ್ರಣ ವ್ಯವಸ್ಥೆ ಸೇರಿದಂತೆ ಹತ್ತಾರು ಬಗೆಯ ವಿನೂತನ ಆವಿಷ್ಕಾರಗಳನ್ನು ವಿದ್ಯಾರ್ಥಿಗಳು ಮಾಡಿದ್ದರು. ಇದರಿಂದ ನಾಟಕ, ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗುತ್ತಿದ್ದ ಪಾರಂಪರಿಕ ಜಗನ್ಮೋಹನ ಅರಮನೆ, ಮಕ್ಕಳ ಪತ್ರಿಭಾ ಪ್ರದರ್ಶನಕ್ಕೆ ವೇದಿಕೆಯಾಗಿ ಮಾರ್ಪಟ್ಟಿತು. ಈ ಎಲ್ಲ ವಿಜ್ಞಾನ ಮಾದರಿಗಳನ್ನು ನೋಡಿದವರು ಇವರು ಯಾವ ದೊಡ್ಡ ವಿಜ್ಞಾನಿಗಳಿಗೂ ಕಮ್ಮಿ ಇಲ್ಲ ಎಂದು ನಿಬ್ಬೆರಗಾದರು.

ಕೆ.ಆರ್.ನಗರದ ಕೆಜಿಬಿ ಶಾಲೆಯ ನಯನ “ಸಿಟಿ ಟುಡೇ” ಜತೆ ಮಾತನಾಡಿ,  ನಾವು ಮನೆಯಿಂದ ಹೊರಹೋದಾಗ ಲೈಟ್, ಫ್ಯಾನ್ ಸೇರಿದಂತೆ ಯಾವುದೇ ಎಲೆಕ್ಟ್ರಿಕ್ ಉಪಕರಣಗಳನ್ನು ಆಫ್ ಮಾಡದೇ ಹೋದರೂ ಹೋಮ್ ಅಪ್ಲಯನ್ಸಸ್ ಕಂಟ್ರೋಲರ್ ವ್ಯವಸ್ಥೆಯಿಂದ ಉಪಕರಣಕ್ಕೆ ಅಳವಡಿಸಿರುವ ಕೋಡ್ ಬಳಸಿ ಆಫ್ ಮಾಡಬಹುದು. ಇದರಿಂದ ಯಾವುದೇ ಅವಘಡಗಳು ಸಂಭವಿಸುವುದಿಲ್ಲ. ಜೊತೆಗೆ ವಿದ್ಯುತ್ ಉಳಿತಾಯವೂ ಆಗುತ್ತದೆ ಎಂದರು.

ತಿ.ನರಸೀಪುರದ ಕೊಳತೂರು ಸರ್ಕಾರಿ ಪೌಢಶಾಲೆಯ ಮೇಘ ಮಾತನಾಡಿ, ಸ್ವಯಂ ಚಾಲಿತ ಭಾರೀ ವಾಹನ ನಿಯಂತ್ರಣ ವ್ಯವಸ್ಥೆಯನ್ನು ಸೂಕ್ಷ್ಮ ಕಡೆಗಳಲ್ಲಿ ಬಳಸಬಹುದು. ಭಾರಿ ವಾಹನಗಳು ಬಂದಾಗ ತನ್ನಿಂತಾನೆ ಗೇಟ್ ಬಂದ್ ಆಗುತ್ತದೆ. ಲಘು ವಾಹನಗಳು ಬಂದಾಗ ಗೇಟ್ ತೆರೆದುಕೊಳ್ಳುತ್ತದೆ. ಇದರಿಂದ ಸೇತುವೆ, ಕಿರಿದಾದ ಜಾಗಗಳು ಸುರಕ್ಷಿತವಾಗಿರುತ್ತವೆ. ಈ ಮಾದರಿಗೆ ಆವಾರ್ಡ್ ಕೂಡ ಬಂದಿದೆ ಎಂದರು.

ಕಾರ್ಯಕ್ರಮ ಸಂಯೋಜಕರಾದ ಶಿವರಾಮು “ಸಿಟಿ ಟುಡೇ”ಯೊಂದಿಗೆ ಮಾತನಾಡಿ, ಮಕ್ಕಳ ದಸರಾ ಅಂಗವಾಗಿ ಆಯೋಜಿಸಿರುವ ವಸ್ತು ಪ್ರದರ್ಶನದಲ್ಲಿ ತಾಲೂಕಿನ ಎಲ್ಲ ಶಾಲೆಗಳು ಭಾಗವಹಿಸುವಂತೆ ತಿಳಿಸಲಾಗಿತ್ತು. ಆದರೆ, ಕೇವಲ ಆಯ್ದ ಶಾಲೆಗಳು ಮಾತ್ರ ಭಾಗವಹಿಸಿವೆ. ಕೆಲ ಮಕ್ಕಳು ತಯಾರಿಸಿರುವ ವಿಜ್ಞಾನ ಮಾದರಿಗಳು ಅತ್ಯುತ್ತಮವಾಗಿದ್ದು ದೇಶಕ್ಕೆ ಮುಂದೊಂದು ದಿನ ಅವುಗಳ ಅಗತ್ಯತೆ ತುಂಬಾ ಇದೆ. ಈ ಮಾದರಿಗಳಲ್ಲಿ ಉತ್ತಮವಾಗಿರುವುದನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

ಭಾಸ್ಕರ್

 

Leave a Reply

comments

Related Articles

error: