ಕರ್ನಾಟಕಪ್ರಮುಖ ಸುದ್ದಿಮೈಸೂರು

ಕಾವೇರಿಗೆ ಜೀವಂತ ವ್ಯಕ್ತಿಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಜೂನ್ 1 ರಂದು ಸಿಎನ್‍ಸಿ ಧರಣಿ

ಮಡಿಕೇರಿ, ಮೇ 30 : ನಾಡಿನ ಜೀವನದಿ ಕಾವೇರಿಗೆ ಜೀವಂತ ಮನುಷ್ಯನ ಶಾಸನಬದ್ಧ ಸ್ಥಾನಮಾನ (ಲಿವಿಂಗ್ ಎಂಟಿಟಿ ಹ್ಯಾವಿಂಗ್ ದಿ ಸ್ಟೇಟಸ್ ಆಫ್ ದಿ ಲೀಗಲ್ ಪರ್ಸನ್) ನೀಡುವ ಮೂಲಕ ನದಿಯ ಸಂರಕ್ಷಣೆಗೆ ಮುಂದಾಗುವಂತೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜೂನ್ 1 ರಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷರಾದ ಎನ್.ಯು. ನಾಚಪ್ಪ ಗಂಗೆ, ಯಮುನಾ ಮತ್ತು ನರ್ಮದಾ ನದಿಗಳಿಗೆ ಅನುಕ್ರಮವಾಗಿ ಉತ್ತರಾಖಂಡ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರಗಳು ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನ ಮಾನವನ್ನು ನೀಡಿವೆ. ಅದರಂತೆಯೇ ವೇದ ಕಾಲದ 7 ಪವಿತ್ರ ಜೀವನದಿಗಳಲ್ಲಿ ಒಂದಾಗಿರುವ ದಕ್ಷಿಣದ ಗಂಗೆ ಕಾವೇರಿಯ ರಕ್ಷಣೆಗಾಗಿ ಕಾವೇರಿ ಮತ್ತು ಅದರ ಉಪನದಿಗಳಿಗೆ ತುರ್ತಾಗಿ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ನದಿಯ ಉಳಿವಿಗೆ ಜೀವಂತ ಮನುಷ್ಯನ ಶಾಸನಬದ್ಧ ಸ್ಥಾನಮಾನವನ್ನು ನೀಡುವುದು ಉತ್ತಮವೆನ್ನುವುದನ್ನು ಪುಷ್ಠೀಕರಿಸಿದ ನಾಚಪ್ಪ ಅವರು, ನ್ಯೂಜಿಲ್ಯಾಂಡ್ ದೇಶವು ಅಲ್ಲಿನ ಮೂಲನಿವಾಸಿ ‘ಮಹೋರಿ’ ಬುಡಕಟ್ಟು ಜನರ ಸಂಸ್ಕೃತಿಯಲ್ಲಿ ಬೆರೆತಿರುವ ‘ವಂಗಾನುಹಿ’ ನದಿಗೆ ಜೀವಂತ ಮನುಷ್ಯನ ಶಾಸನಬದ್ಧ ಸ್ಥಾನಮಾನ ನೀಡುವ ಮೂಲಕ ಇಂತಹ ಕ್ರಮ ಕೈಗೊಂಡ ಜಗತ್ತಿನ ಮೊತ್ತ ಮೊದಲ ರಾಷ್ಟ್ರವಾಗಿದೆ. ಆ ನಂತರ ಭಾರತದಲ್ಲಿ ಮೂರು ನದಿಗಳಿಗೆ ಜೀವಂತ ಮನುಷ್ಯನ ಸ್ಥಾನಮಾನವನ್ನು ಕಲ್ಪಿಸಲಾಯಿತು.

ಇದೇ ರೀತಿ ಕೊಡವ ಬುಡಕಟ್ಟು ಸಮೂಹದ ಪೂರ್ವಜಳಾದ ಜೀವನದಿ ‘ಕಾವೇರಿ’ಗೂ ‘ಲಿವಿಂಗ್ ಎಂಟಿಟಿ ಹ್ಯಾವಿಂಗ್ ದಿ ಸ್ಟೇಟಸ್ ಆಫ್ ದಿ ಲೀಗಲ್ ಪರ್ಸನ್’ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಧರಣಿ ನಡೆಸುತ್ತಿರುವುದಾಗಿ ತಿಳಿಸಿದರು.

ತಮ್ಮ ಬೇಡಿಕೆಯ ಈಡೇರಿಕೆಗಾಗಿ ರಾಷ್ಟ್ರಪತಿಗಳು ತುರ್ತು ಸುಗ್ರೀವಾಜ್ಞೆಯನ್ನು ಹೊರಡಿಸಬೇಕೆಂದು ಮನವಿ ಮಾಡಿದ ನಾಚಪ್ಪ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಮಂತ್ರಿ ರಾಜನಾಥ್‍ಸಿಂಗ್ ಅವರು ಕೇಂದ್ರ ಶಾಸನವನ್ನು ಮುಂದಿನ ಅಧಿವೇಶನದಲ್ಲಿ ತರುವ ಮೂಲಕ ಕಾವೇರಿಯ ಸಂರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಿಎನ್‍ಸಿ ಸಂಘಟನೆ ತನ್ನ ಬೇಡಿಕೆಗಳ ಮನವಿ ಪತ್ರಗಳನ್ನು ಕೇಂದ್ರ ಜಲ ಸಂಪನ್ಮೂಲ ಮಂತ್ರಿ ಉಮಾಭಾರತಿ, ವಿಶ್ವ ಸಂಸ್ಥೆಯ ಮಹಾಕಾರ್ಯದರ್ಶಿ ಅಂಟಾನಿಯೊ ಗುಟರೆಸ್, ಯುನೆಸ್ಕೊ ಡೈರೆಕ್ಟರ್ ಜನರಲ್ ಐರಿನಾ ಬೊಕಾವೊ, ಯುಎನ್‍ಹೆಚ್‍ಆರ್‍ಸಿ ಹೈ ಕಮೀಷನರ್ ಪ್ರಿನ್ಸ್ ಝಾಹೀದ್‍ರಾದ್-ಆಲ್-ಹುಸೈನ್, ಭಾರತದ ಸರ್ವೋಚ್ಚ ನ್ಯಾಯಮೂರ್ತಿಗಳಾದ ಜೆ.ಎಸ್.ಖೆಹರ್‍ ಅವರಿಗೆ ಸುಪ್ರೀಂ ಕೋರ್ಟ್‍ನ ರಿಜಿಸ್ಟ್ರಾರ್ ಜನರಲ್ ಮೂಲಕ ಮತ್ತು ಅಂತರರಾಷ್ಟ್ರೀಯ ಜಲವಿವಾದ ನ್ಯಾಯ ಮಂಡಳಿ ಅಧ್ಯಕ್ಷರಿಗೆ ಕಳುಹಿಸಿ ಕೊಡಲಾಗಿದೆ ಎಂದು ನಾಚಪ್ಪ ತಿಳಿಸಿದರು.

ರಾಜಕೀಯ ಲಾಭಕ್ಕಾಗಿ ಕೆಲವರು ಕಾವೇರಿ ನದಿಯ ಮೇಲಿನ ಅಭಿಮಾನವನ್ನು ತೋರ್ಪಡಿಸುತ್ತಿದ್ದು, ಇದನ್ನು ಖಂಡಿಸುತ್ತೇವೆ. ಕೊಡವ ಲ್ಯಾಂಡ್ ಬೇಡಿಕೆಯನ್ನು ಈಡೇರಿಸಬೇಕು, ಕೊಡವರನ್ನು ಬುಡಕಟ್ಟ ಜನಾಂಗವೆಂದು ಘೋಷಿಸಬೇಕು ಎಂಬ ಬೇಡಿಕೆಗಳು ಸೇರಿದಂತೆ ಸಿಎನ್‍ಸಿ ಸಂಘಟನೆಯ ವಿವಿಧ ಬೇಡಿಕೆಗಳ ಬಗ್ಗೆ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಪುಲ್ಲೇರ ಕಾಳಪ್ಪ, ಚಂಬಾಂಡ ಜನತ್ ಹಾಗೂ ಕೂಪದಿರ ಸಾಬು ಉಪಸ್ಥಿತರಿದ್ದರು.

-ಕೆ.ಸಿ.ಐ/ಎನ್.ಬಿ.ಎನ್.

Leave a Reply

comments

Related Articles

error: