ಮೈಸೂರು

ವಿವಿಧ ವೇಷ ಧರಿಸಿ ಮಿಂಚಿದ ಮಹಿಳಾಮಣಿಗಳು

whatsapp-image-2016-10-04-at-7-webದಸರಾ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಹೊಳೆಯೇ ಹರಿಯುತ್ತಿದೆ. ಜೆ.ಕೆ. ಗ್ರೌಂಡ್ಸ್ ನಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ವೇಷ-ಭೂಷಣ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು.

ಟಿಬೇಟಿಯನ್ ಶೈಲಿಯ ಉಡುಗೆ ವಿಶೇಷ ರೀತಿಯಲ್ಲಿ ಕಂಡರೆ, ಕಾಶ್ಮೀರಿ ಬೆಡಗಿ ಬಿಡುಗು ಬಿನ್ನಾಣದಿಂದ ತನ್ನ ರಾಜ್ಯವನ್ನು ಪ್ರತಿನಿಧಿಸಿದರು. ಬೆಂಗಾಲಿ ಬಾಲೆ, ರಾಜಸ್ತಾನದ ಕುವರಿಯರು ತಮ್ಮದೇ ಶೈಲಿಯ ಮೂಲಕ ಅಲ್ಲಿ ನೆರೆದಿದ್ದ ಜನರ ಶಿಳ್ಳೆಗಳಿಗೆ ಪಾತ್ರರಾದರು. ಗುಜರಾತಿನ ಚೆಲುವೆ ದಾಂಡಿಯಾ ನೃತ್ಯದ ಮೂಲಕ ಪ್ರೇಕ್ಷಕರ ಗಮನ ಸೆಳೆದರೆ, ಕೇರಳದ ಕುಟ್ಟಿಯರು ತಮ್ಮ ಮಲೆಯಾಳಂ ಭಾಷೆಯಲ್ಲಿ ದಸರಾ ಹಬ್ಬದ ಶುಭಾಶಯ ಹೇಳಿದರು.

ಕರ್ನಾಟಕದಿಂದ ಮೈಸೂರನ್ನು ಪ್ರತಿನಿಧಿಸಿ ಮೈಸೂರು ರೇಷ್ಮೆ ಸೀರೆ ತೊಟ್ಟು, ಮೈಸೂರು ಮಲ್ಲಿಗೆ ಮುಡಿದು, ತಟ್ಟೆಯಲ್ಲಿ ಮೈಸೂರು ವೀಳ್ಯೆದೆಲೆ, ನಂಜನಗೂಡು ಬಾಳೆಹಣ್ಣು ತಂದು ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಹುಬ್ಬಳ್ಳಿಯ ಕನ್ನಡತಿ ಹುಬ್ಬಳ್ಳಿ ಶೈಲಿಯಲ್ಲಿ ಸೀರೆಯುಟ್ಟು ವೀರನಾರಿಯಂತೆ ಎಲ್ಲರ ಚಪ್ಪಾಳೆಗೆ ಪಾತ್ರರಾದರು. ಕೊಡಗಿನ ಕೊಡವತಿ ಅವರದೇ ಆದ ಶೈಲಿಯನ್ನು ಪ್ರದರ್ಶಿಸಿದರೆ, ಮಡಿಕೇರಿಯ ನಾರಿ ಕೂರ್ಗಿ ಶೈಲಿಯಲ್ಲಿ ಸೀರೆಯುಟ್ಟು ಬಂದಿದ್ದು ವಿಶೇಷವಾಗಿತ್ತು. ಕನ್ನಡದ ಮದುಮಗಳಂತೆ ಸಿಂಗರಿಸಿಕೊಂಡು ಬಂದಿದ್ದ ಆಕೆಯ ಅನನ್ಯ ಶೈಲಿಯಂತೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ವಿಶೇಷ ಎನಿಸಿತು. ಆಂಧ್ರಪ್ರದೇಶ, ಮರಾಠಿ, ದಕ್ಷಿಣ ಕನ್ನಡ,  ಹೀಗೆ ಹಲವು ರಾಜ್ಯಗಳಿಂದ ಆಗಮಿಸಿದ್ದ ಸ್ಪರ್ಧಿಗಳು ತಮ್ಮ ಶೈಲಿಯ ವೇಷ-ಭೂಷಣ ತೊಟ್ಟು ಮನರಂಜಿಸಿದರು.

ಈ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಸ್ವಚ್ಛತಾ ಅಭಿಯಾನದಡಿ ಶುಚಿತ್ವದ ಬಗ್ಗೆ ಅರಿವು ಮೂಡಿಸಲು ಇಬ್ಬರು ಸ್ಪರ್ಧಿಗಳು ಮಾಡಿದ ಒಂದು ಪುಟ್ಟ ಪಾತ್ರ ಜನರಲ್ಲಿ ಜಾಗೃತಿ ಮೂಡಿಸುವ ಭಾವನೆಯಲ್ಲಿ ಕಂಡಿದ್ದು ವಿಶೇಷವಾಗಿತ್ತು. ಇದಲ್ಲದೇ ಕೊರವಂಜಿ, ಬುಡಬುಡಿಕೆ, ಹುಚ್ಚಿ ಪಾತ್ರಗಳು ಇಲ್ಲಿ ಮೂಡಿಬಂದು ಪ್ರೇಕ್ಷಕರನ್ನು ರಂಜಿಸಿದವು.

ಸುಮಾರು 16 ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 50 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು 50 ವರ್ಷಕ್ಕಿಂತ ಕೆಳಗಿನ ಮಹಿಳೆಯರು ಎಂದು ವಿಭಾಗಿಸಿ ಬಹುಮಾನ ನೀಡಲಾಯಿತು. ಈ ಪೈಕಿ ಮೊದಲ ಗುಂಪಿನಲ್ಲಿ ಗುಜರಾತಿಗೆ ಪ್ರಥಮ ಬಹುಮಾನ, ಕಾಶ್ಮೀರಿಗೆ ದ್ವಿತೀಯ ಬಹುಮಾನ, ಕೇರಳದ ಕುಟ್ಟಿಗೆ ತೃತೀಯ ಬಹುಮಾನ  ಬಂದರೆ, ಎರಡನೇ ಗುಂಪಿನಲ್ಲಿ ಕರ್ನಾಟಕದ ಮದುವಣಗಿತ್ತಿಗೆ ಪ್ರಥಮ ಬಹುಮಾನ, ಕೊರವಂಜಿ ಮತ್ತು ಬುಡಬುಡಿಕೆ ಪಾತ್ರಕ್ಕೆ ದ್ವಿತೀಯ ಮತ್ತು ತೃತೀಯ ಬಹುಮಾನಗಳು ಬಂದವು.

ಗೆದ್ದ ಸ್ಪರ್ಧಿಗಳ ಹೆಸರನ್ನು ಕೂಗುತ್ತಿದ್ದಂತೆ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಕೋಪಗೊಂಡರು. ವಿವಿಧ ರಾಜ್ಯಗಳ ವೇಷ ಭೂಷಣ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸದೇ ಒಂದು ಜನಾಂಗ/ ಪಂಗಡವನ್ನು ಪ್ರತಿನಿಧಿಸಿ ಬಹುಮಾನ ನೀಡಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು. ಈ ತೀರ್ಪು ಮೋಸವೆಂದು ತೀರ್ಪುಗಾರರ ಮೇಲೆ ಕಿಡಿಕಾರಿದರು. ಉಳಿದ ಪ್ರೇಕ್ಷಕರೂ ಸಹ ಇದಕ್ಕೆ ಸಾಥ್ ನೀಡಿದ್ದು ಕಂಡುಬಂದಿತು.

Leave a Reply

comments

Related Articles

error: