ಪ್ರಮುಖ ಸುದ್ದಿಮೈಸೂರು

ಜನರ ಕಣ್ಮನ ಸೆಳೆದ ಸಾಂಸ್ಕೃತಿಕ ರಾಯ್ ನೃತ್ಯ

dance-2-webನಾಡಹಬ್ಬ ಮೈಸೂರು ದಸರಾ ವಿಶೇಷತೆಗಳ ಆಗರ. ಸ್ಮಾರಕಗಳು, ಕಟ್ಟಡಗಳು ಬೆಳಕಿನ ರಂಗವಲ್ಲಿಯನ್ನು ಹಾಸಿಹೊದ್ದಂತೆ ಕಂಗೊಳಿಸಿ ಕಂಗಳಿಗೆ ಮುದ ನೀಡುತ್ತಿವೆ. ದಸರಾ ಮಹೋತ್ಸವದಲ್ಲಿ ಊಟದಿಂದ ಹಿಡಿದು ನೋಟದವರೆಗೂ ಎಲ್ಲವೂ ವಿಶೇಷವೇ.

ಮಹೋತ್ಸವದಂಗವಾಗಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ನಾಲ್ಕನೆ ದಿನದಂದು ವೇದಿಕೆಯಲ್ಲಿ ಕಲಾವಿದರು ಸಾಂಸ್ಕೃತಿಕ ರಸದೌತಣ ನೀಡಿದ್ದರು. ನಗರದ ಚಿಕ್ಕ ಗಡಿಯಾರ ವೇದಿಕೆಯಲ್ಲಿ ಸೂರ್ಯಾಸ್ತದ ಮುಂಬೆಳಕಿನಲ್ಲಿ ಆರಂಭವಾದ ಕಾರ್ಯಕ್ರಮಕ್ಕೆ ಮಧ್ಯಪ್ರದೇಶದ ದಕ್ಷಿಣ ವಲಯ ಸಾಂಸ್ಕೃತಿಕ ರಾಯ್ ನೃತ್ಯ ಜಾನಪದ ನೃತ್ಯ ಕೋಲಾಟ, ಪೂಜಾ ಹಾಗೂ ಜೋಗತಿ ಕುಣಿತ ಪ್ರೇಕ್ಷಕರನ್ನು ಮುದಗೊಳಿಸಿ ಶಿಳ್ಳೆ ಚಪ್ಪಾಳೆ ಗಿಟ್ಟಿಸಿದವು.

ಜಿಲ್ಲೆಯ ಹೆಚ್.ಡಿ.ಕೋಟೆಯ ಶ್ರೀಗೌತಮ್ ಕಲಾ ಬಳಗದಿಂದ ಜರುಗಿದ ಕೋಲಾಟವು ನೆರೆದಿದ್ದ ಪ್ರೇಕ್ಷಕರಿಗೆ ಜಾನಪದ ಲೋಕವನ್ನು ಆನಾವರಣಗೊಳಿಸಿತು. ಸ್ವರಚಿತ ಹಾಸ್ಯ ಭರಿತ ಜನಪದ ಹಿನ್ನಲೆ ಗಾಯನವು ಪ್ರೇಕ್ಷಕರಿಗೆ ಹಾಸ್ಯದೊಂದಿಗೆ ಮನರಂಜನೆ ನೀಡಿತು. ಸುಮಾರು 30 ನಿಮಿಷಗಳ ಕಾಲ ನಡೆದ ಪೂಜಾ ಕುಣಿತವು ಸಾಂಪ್ರದಾಯಿಕ ತಾಳ ಮದ್ದಳೆಗಳ ನಿನಾದಕ್ಕೆ ಹೆಜ್ಜೆ ಹಾಕಿದ ಕಲಾವಿದರು ಭಕ್ತಿ ಭಾವದೊಂದಿಗೆ ಸಾಂಸ್ಕೃತಿಕ ರಸದೌತಣ ನೀಡಿದರು. ನೃತ್ಯದ ಹಲವಾರು ಭಂಗಿಗಳಿಗೆ ಪ್ರೇಕ್ಷಕರು ಹುಬ್ಬೇರಿಸಿ ಸೋಜಿದಿಂದ ಭೇಷ್ ಎಂದು ಉದ್ಗಾರ ತೆಗೆದರು. ಗದಗದ ಶ್ರೀ ಶಂಕರಣ್ಣ ಮತ್ತು ತಂಡದ ಜೋಗತಿ ಕುಣಿತ ಹಾಗೂ ಬಾಗಲಕೋಟೆ ಜಲ್ಲೆಯ ಶಿವಶರಣ ಭಜನಾ ಮಂಡಳಿಯವರು ತತ್ವ ಗೀತೆಗಳ ಭಜನೆಯು ಪ್ರೇಕ್ಷಕರಿಗೆ ಪಾರಮಾರ್ಥಿಕ ಲೋಕದ ವಿಹಾರ ಮಾಡಿಸಿತು.

ವಿಳಂಬ : 6 ಗಂಟೆಯಾದರು ಕಾರ್ಯಕ್ರಮದ ಸುಳಿವೇ ಇಲ್ಲ. ನೆರೆದಿದ್ದ ಪ್ರೇಕ್ಷಕರು ಆರಂಭಿಸಿ ಎಂದು ಆಗ್ರಹಸಿಲು ಶುರುವಿಟ್ಟಾಗ ಆಯೋಜಕರು ಮೈಕ್ ಹಿಡಿದು ಸಮಜಾಯಿಷಿ ನೀಡಿದರು. ಕಾರ್ಯಕ್ರಮವು 45 ನಿಮಿಷ ವಿಳಂಬವಾಗಿ ಶುರುವಾಯಿತು. ಹೆಚ್.ಡಿ.ಕೋಟೆಯ ಕೋಲಾಟದ ಬದಲು ಮಧ್ಯಪ್ರದೇಶದ ದಕ್ಷಿಣ ಸಾಂಸ್ಕೃತಿಕ ವಲಯ ಕೇಂದ್ರ ನೃತ್ಯದೊಂದಿಗೆ ಶುರುವಾಯಿತು. ಕಾರ್ಯಕ್ರಮದಲ್ಲಿ ಹಲವಾರು ಬದಲಾವಣೆಗಳಾಗಿದ್ದು ಕಂಡು ಬಂತು.

ಸಾರ್ವಜನಿಕವಾಗಿಯೇ ಪೋಷಾಕು ತೊಟ್ಟ ಕಲಾವಿದರು : ಹೆಚ್.ಡಿ.ಕೋಟೆ ಶ್ರೀಗೌತಮ್ ಕೋಲಾಟ ತಂಡದವರು ಪೋಷಾಕು ಧರಿಸಲು ಜಾಗ ಬೇಕು ಎಂದು ಆಯೋಜಕರನ್ನು ಕೇಳಿದಾಗ ಇಲ್ಲೇ ಹಿಂದೆ ಮಾಡಿಕೊಳ್ಳಿ ಎಂದು ವೇದಿಕೆಯ ಹಿಂಭಾಗದ ಚಿಕ್ಕ ಗಡಿಯಾರದ ಕೆಳಭಾಗವನ್ನು ತೋರಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ನಾವು ಮನುಷ್ಯರೇ ಸಾರ್ವಜನಿಕವಾಗಿ ಬಟ್ಟೆ ಬದಲಾಯಿಸಿ ಎಂದರೇ ಸಂಕೋಚವಾಗುವುದು. ಈ ಬಗ್ಗೆ ಸಿಟಿಟುಡೆಯೊಂದಿಗೆ ತಂಡದ ಮುಖ್ಯಸ್ಥ ಪ್ರಕಾಶ್ ಮಾತನಾಡಿ, ಸ್ಥಳ ಕೇಳಿದ್ದಕ್ಕೆ ಊರಿನಿಂದಲೇ ರೆಡಿಯಾಗಿ ಬನ್ನಿ ಎಂದು ತಾತ್ಸಾರರ ಉತ್ತರ ನೀಡುತ್ತಿದ್ದಾರೆ. ಇದು ದುರಂಹಕಾರದ ಪರಮಾವಧಿ. ಸ್ಥಳೀಯ ಕಲಾವಿದರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ನೋವಿನಿಂದ ಅಧಿಕಾರಿಗಳನ್ನು ದೂರಿದರು.

ನಗರದ ಬಯಲು ರಂಗಮಂದಿರದಲ್ಲಿ ಕಲಾವಿದರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ಒಂದು ಗಂಟೆಯೇ ಮುಂಚಿತವಾಗಿ ಕಾರ್ಯಕ್ರಮದ ಸ್ಥಳದಲ್ಲಿರುವಂತೆ ಸೂಚನೆ ನೀಡಲಾಗಿದ್ದು ವಿಳಂಬವಾಗಿ ಆಗಮಿಸಿ ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ವೇದಿಕೆಯ ಮೇಲ್ತುಸುವಾರಿ ಅಧಿಕಾರಿ ಮಹೇಶ್ ಸ್ಪಷ್ಟನೆ ನೀಡಿದರು.

 

 

Leave a Reply

comments

Related Articles

error: