ಕರ್ನಾಟಕಪ್ರಮುಖ ಸುದ್ದಿ

ಪಾರ್ವತಮ್ಮ ರಾಜ್ ಕುಮಾರ್ ನಿಧನ – ರಾಜ್ಯದಲ್ಲಿ ಮಡುಗಟ್ಟಿದ ಶೋಕ; ಗಣ್ಯರಿಂದ ತೀವ್ರ ಸಂತಾಪ

ರಾಜ್ಯ (ಪ್ರಮುಖ ಸುದ್ದಿ) ಬೆಂಗಳೂರು, ಮೇ 31 : ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನದಿಂದಾಗಿ ರಾಜ್ಯದಲ್ಲಿ ಶೋಕ ಮಡುಗಟ್ಟಿದೆ. ರಾಜ್ಯದಲ್ಲಿ ಆಯೋಜನೆಯಾಗಿದ್ದ ಪ್ರಮುಖ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದ್ದು ಚಿತ್ರರಂಗದ ಮತ್ತು ರಾಜಕೀಯ ರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಪಾರ್ವತಮ್ಮ ಅವರ ಸೇವೆಯ ಕುರಿತು ಕೊಂಡಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾರ್ವತಮ್ಮ ಅವರ ವ್ಯಕ್ತಿತ್ವ ದೊಡ್ಡದು. ರಾಜ್‍ ಕುಮಾರ್ ಹಿಂದಿನ ಪ್ರೇರಕ ಶಕ್ತಿಯಾಗಿದ್ದರು. ವಿತರಕರಾಗಿ, ನಿರ್ಮಾಪಕರಾಗಿ ಕೂಡ ಕನ್ನಡ ಚಿತ್ರಂಗಕ್ಕೆ ಅವರ ಸೇವೆ ಅನುಪಮ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾತನಾಡಿ, “ಪಾರ್ವತಮ್ಮ ಅವರು ಕುಟುಂಬದ ಒಳಿತಿಗಾಗಿ ಮತ್ತು ಕನ್ನಡ ಚಿತ್ರರಂಗದ ಒಳಿತಿಗಾಗಿ ಸಮಾನವಾಗಿ ಶಕ್ತಿ ವ್ಯಯಿಸಿ ದುಡಿದವರು. ಓರ್ವ ಮಹಿಳೆ ಮನಸು ಮಾಡಿದರೆ ಮಹತ್ಕಾರ್ಯಗಳನ್ನು ಸಾಧಿಸಬಹುದು ಎನ್ನುವುದನ್ನು ನಿಜ ಮಾಡಿ ತೋರಿಸಿದ ವ್ಯಕ್ತಿ ಅವರು. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿನೀಡಲಿ” ಎಂದು ಪ್ರಾರ್ಥಿಸಿದ್ದಾರೆ.

ಹಾವೇರಿಯಲ್ಲಿ ಕಾರ್ಯಕ್ರಮ ನಿಮಿತ್ತ ತೆರಳಿದ್ದ ಕುಮಾರಸ್ವಾಮಿಯವರು ಅಲ್ಲಿನ ಎಲ್ಲ ಕಾರ್ಯಕ್ರಮಗಳನ್ನೂ ರದ್ದುಪಡಿಸಿ ಪಾರ್ವತಮ್ಮ ಅವರ ಅಂತಿಮ ದರ್ಶನ ಪಡೆಯಲು ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ. ಕಾರ್ಯಕ್ರಮ ಆಯೋಜನೆ ಆಗಿದ್ದ ವೇದಿಕೆಯಲ್ಲಿ ಪಾರ್ವತಮ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಂತೆ ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರಿಗೆ ಸೂಚಿಸಿದ್ದೆನೆ ಎಂದು ತಿಳಿಸಿದ್ದಾರೆ.

ನಾದಬ್ರಹ್ಮ ಹಂಸಲೇಖ ಅವರು ಮಾತನಾಡಿ, “ಪಾರ್ವತಮ್ಮ ಅವರು ಡಾ. ರಾಜ್ ಕುಮಾರ್ ಅವರನ್ನು ಪ್ರಯೋಗಶೀಲ ಪಾತ್ರಗಳಲ್ಲಿ ತೋರಿಸಿ ಒಬ್ಬ ಮಹಾನ್ ನಟನಿಗೆ ಬೆಂಬಲವಾಗಿ ನಿಂತವರು. ರಾಜ್ ಕುಮಾರ್ ಅವರ ಪ್ರತಿಭೆಯನ್ನು ಉಪಯೋಗಿಸಿಕೊಳ್ಳುವವರಿಂದ ಕಾಪಾಡಿ ಪ್ರಯೋಗಶೀಲ ಪಾತ್ರಗಳ ಮೂಲಕ ಅವರ ಪೂರ್ಣ ಪ್ರತಿಭೆ ವೈವಿಧ್ಯಮಯ ರೀತಿಯಲ್ಲಿ ಹೊರಹೊಮ್ಮಲು ಸಹಕಾರಿಯಾದವರು. ಕುಟುಂಬದ ಜೊತೆಗೆ ಚಿತ್ರರಂಗದ ಸಮಸ್ಯೆಗಳಿಗೂ ಸ್ಪಂದಿಸುತ್ತಿದ್ದರು. ಅವರ ಬಗ್ಗೆ ಎಷ್ಟು ಗುಣಗಾನ ಮಾಡಿದರೂ ಸಾಲದು. ಎರಡು ಮಾತುಗಳಲ್ಲಿ ಹೇಳಿ ಮುಗಿಸುವ ವ್ಯಕ್ತಿತ್ವ ಅಲ್ಲ” ಎಂದಿದ್ದಾರೆ.

ಹಿರಿಯ ನಟಿ ಜಯಂತಿ ಅವರು ಮಾತನಾಡಿ, ನನಗೆ ತುಂಬಾ ಪ್ರೀತಿ ನೀಡಿ ಬೆಳೆಸಿದ ವ್ಯಕ್ತಿ ಪಾರ್ವತಮ್ಮ ಅವರು. ಎಷ್ಟೋ ದಿನ ನಾನು ಅವರ ಕೈ ಊಟ ಮಾಡಿದ್ದೇನೆ. ಕುಟುಂಬ ಸದಸ್ಯಳಂತೆ ಇದ್ದೆ ನಾನು. ಕುಟುಂಬದ ಒಬ್ಬ ಹಿರಿಯ ಸದಸ್ಯರನ್ನು ನಾನು ಕಳೆದುಕೊಂಡಿದ್ದೆನೆ ಎನ್ನುವ ದುಃಖ ನನ್ನನ್ನು ಆವರಿಸಿದೆ ಎಂದು ತೀವ್ರ ಭಾವುಕರಾದರು. ಭಗವಂತ ದುಃಖ ಪರಿಹರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

-ಎನ್.ಬಿ.ಎನ್.

ಪುನೀತ್ ರಾಜ್ ಕುಮಾರ್ ಅವರಿಗೆ ಸಾಂತ್ವನ ಹೇಳುತ್ತಿರುವ ಸಿಂಎಂ ಸಿದ್ದರಾಮಯ್ಯ.

Leave a Reply

comments

Related Articles

error: