ಮೈಸೂರು

ಉತ್ತಮ ಕಾವ್ಯ ರಚನೆಯೇ ಪುರುಷ ಪ್ರಾಬಲ್ಯಕ್ಕೆ ತಕ್ಕ ಉತ್ತರ: ಮಹಿಳಾ ಕವಯಿತ್ರಿಯರಿಗೆ ಡಾ. ಆಶಾದೇವಿ ಕರೆ

“ಕಾವ್ಯ ಎಂಬುದು ಮನಸ್ಸಿನಲ್ಲಿರುವ ಮಾನವೀಯ ಸಂಸ್ಕಾರವನ್ನು ಅಭಿವ್ಯಕ್ತಿಗೊಳಿಸುವ ಅದ್ಭುತ ಕಲಾಪ್ರಕಾರ. ಸಾಹಿತ್ಯದ ಹಲವು ಕವಲುಗಳಲ್ಲಿ ಕಾವ್ಯ ಪ್ರಾಕಾರ ಬಹಳ ಪರಿಣಾಮಕಾರಿ. ಮಹಿಳಾ ಮತ್ತು ಪುರುಷ ಕಾವ್ಯಗಳ ಅಭಿವ್ಯಕ್ತಿಗಳಲ್ಲಿ ವಿಭಿನ್ನ ವಿಶೇಷಣಗಳನ್ನು ನಾವು ಕಾಣಬಹುದಾಗಿದೆ ಎನ್ನುವುದನ್ನು ಬಿಟ್ಟರೆ ಪುರಷರು ರಚಿಸಿದ ಕಾವ್ಯಗಳು ಶ್ರೇಷ್ಠ, ಮಹಿಳಾ ಕಾವ್ಯಗಳೂ ಶ್ರೇಷ್ಠವಲ್ಲ ಎನ್ನುವ ಗತಕಾಲದ ಮನೋಭಾವದಿಂದ ನಾವು ಆಚೆ ಬರಬೇಕಿದೆ ಎಂದು ಡಾ. ಎಂ.ಎಸ್‍. ಆಶಾದೇವಿ ಅಭಿಪ್ರಾಯಪಟ್ಟರು.

ಮೈಸೂರಿನ ಬಿ.ಎನ್. ರಸ್ತೆಯಲ್ಲಿರುವ ಜೆಎಸ್‍ಎಸ್‍ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ಏರ್ಪಡಿಸಿದ್ದ ‘ಕನ್ನಡದ ಮಹಿಳಾ ಕಾವ್ಯಗಳು’ ಎಂಬ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡುತ್ತಿದ್ದರು.

ನಮ್ಮ ಭಾರತೀಯ ಸಮಾಜದಲ್ಲಿ ಹೆಣ್ಣನ್ನು ಅನುಭೋಗೀಯ ನೆಲೆಯಲ್ಲಿ ನೋಡಲಾಗುತ್ತಿದೆ. ಸಾಹಿತ್ಯ ಕ್ಷೇತ್ರದಲ್ಲಿ ಈ ಚಿತ್ರ ಬದಲಾಗಬೇಕಿದೆ. ಹೆಣ್ಣು ನಿರ್ವಹಿಸುವ ಜವಾಬ್ದಾರಿಗಳು ಗಂಡಿಗೆ ಇಲ್ಲ. ಹೆಣ್ಣಿನ ಭಾಷೆ, ಅಭಿವ್ಯಕ್ತಿ ಮತ್ತು ವ್ಯಕ್ತಿತ್ವ ಪುರುಷ ಪ್ರಧಾನ ವ್ಯವಸ್ಥೆಯ ಕರಾರುಬದ್ಧವಾದ ನಿರೂಪಣೆಗಳಿಗೇ ಒಳಗಾಗಿ ನಡೆದುಕೊಂಡು ಬಂದಿದೆ ಎಂದರು.

ಇದನ್ನೆಲ್ಲ ಬದಿಗೆ ತಳ್ಳಿ ಇಂದಿನ ಕವಯತ್ರಿಯರು ತಮ್ಮ ಅಸ್ಮಿತೆಯನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕಾವ್ಯ ರಚನೆ ಮಾಡುತ್ತಿದ್ದಾರೆ. ‘ನಾನು’ ಎನ್ನುವ ಸ್ವಂತಿಕೆಯನ್ನು ಕಟ್ಟಿಕೊಳ್ಳುತ್ತಾ, ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವ ಅನಿವಾರ್ಯತೆಯೂ ಇದೆ. ಮಹಿಳಾ ಕಾವ್ಯದಲ್ಲಿ ಅನುಭವಲೋಕ ಸಂಕುಚಿತವಾದದ್ದು ಎಂಬ ಟೀಕೆಗಳು ಸಾಮಾನ್ಯವಾಗಿವೆ. ಆದರೆ, ಅವರ ಅನುಭವದ ಸಮತೋಲನವನ್ನು ಗುರುತಿಸುವ ಅಗತ್ಯವಿದೆ. ಇಂದಿನ ಕವಯಿತ್ರಿಯರು ಲೋಕವನ್ನು ಬದಲಿಸುವುದರಲ್ಲಿ ಹೆಚ್ಚು ಆಸಕ್ತರಾಗಿಲ್ಲ. ಇಂದು ಮಹಿಳಾ ಕಾವ್ಯವೆಂದರೆ “ಸ್ವಪ್ರಜ್ಞೆ, ಸ್ವಚಿತ್ರ ಮತ್ತು ಸ್ವಾಯತ್ತತೆಯನ್ನು ಕಟ್ಟಿಕೊಡುವುದು” ಎಂದು ಕರೆ ನೀಡಿದರು.

ಇಂದಿನ ಪ್ರಮುಖ ಮಹಿಳಾ ಬರಹಗಾರರಾದ ವಿನಯ ಒಕ್ಕುಂದ, ಪ್ರತಿಭಾ ನಂದಕುಮಾರ್ ಅವರ ಕಾವ್ಯಗಳನ್ನು ವಾಚಿಸಿ ಅವುಗಳ ನೆಲೆ-ಬೆಲೆಗಳನ್ನು ವ್ಯಾಖ್ಯಾನಿಸಿದರು. ಈ ಮೂಲಕ ಮಹಿಳಾ ಕವಯಿತ್ರಿಯರನ್ನು ಪ್ರಮುಖ ಸಾಹಿತಿಗಳ ಸಾಲಿನಲ್ಲಿ ಗುರುಸಿಸಬೇಕು ಎಂದರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ಕಾಲೇಜು ಸಮುಚ್ಛಯದ ಮುಖ್ಯ ಕಾರ್ಯನಿರ್ವಾಹಕರಾದ ಪ್ರೊ. ಬಿ.ವಿ. ಸಾಂಬಶಿವಯ್ಯನವರು, ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ. ಮಹದೇವಪ್ಪನವರು, ಸುವರ್ಣ ಮಹೋತ್ಸವ ಆಚರಣಾ ಸಮಿತಿಯ ಕಾರ್ಯದರ್ಶಿಗಳಾದ ಪ್ರೊ. ಡಿ.ಎಸ್. ಸದಾಶಿವಮೂರ್ತಿ ಅವರು ಉಪಸ್ಥಿತರಿದ್ದರು.

Leave a Reply

comments

Related Articles

error: