ಕರ್ನಾಟಕಪ್ರಮುಖ ಸುದ್ದಿಮೈಸೂರು

ಮಧ್ಯರ್ತಿಗಳಿಂದ ಸೇನೆಗೆ ಸೇರಲು ಸಾಧ್ಯವಿಲ್ಲ : 3200 ಆಕಾಂಕ್ಷಿಗಳಿಗೆ ಬ್ರಿಗೇಡಿಯರ್ ಕಿವಿಮಾತು

ಮಡಿಕೇರಿ, ಮೇ 31 : ರಾಜ್ಯದ ದಕ್ಷಿಣ ಭಾಗದ ಹದಿಮೂರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ನಗರದಲ್ಲಿ ನಡೆಯುತ್ತಿರುವ ‘ಸೇನಾ ಭರ್ತಿ ರ್ಯಾಲಿ’ಯಲ್ಲಿ ನೋಂದಾಯಿತ 5500 ಮಂದಿಯಲ್ಲಿ 3200 ಮಂದಿ ಪಾಲ್ಗೊಂಡಿದ್ದಾರೆ ಎಂದು ಕರ್ನಾಟಕ ಮತ್ತು ಕೇರಳ ವಿಭಾಗದ ಭಾರತೀಯ ಸೇನೆಯ ರಿಕ್ರೂಟ್‍ಮೆಂಟ್ ಮುಖ್ಯಸ್ಥರಾದ ಬ್ರಿಗೇಡಿಯರ್ ಪಿ.ಎಸ್. ಭಾಜ್ವಾ ತಿಳಿಸಿದ್ದಾರೆ.

ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈನ್ಯದ ವಿವಿಧ ಹುದ್ದೆಗಳಿಗೆ ಕೊಡಗು ಜಿಲ್ಲೆಯಿಂದ 1070 ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದು, ಇವರಲ್ಲಿ ಅಂದಾಜು 700 ಮಂದಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಮೊದಲ ಹಂತದ ಈ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ 1.6 ಕಿ.ಮೀ ಓಟ, ಪುಲ್ ಅಪ್ಸ್ ಸೇರಿದಂತೆ ವಿವಿಧ ಪರೀಕ್ಷೆಗಳ ಮೂಲಕ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾದವರ ಎತ್ತರ, ತೂಕ ಮೊದಲಾದವುಗಳನ್ನು ಪರೀಕ್ಷಿಸಲಾಗುತ್ತದೆ. ನಂತದ ಆರ್ಮಿ ಮೆಡಿಕಲ್ ಕ್ಯಾಂಪ್ಸ್‍ನ ಐವರು ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಲಿದೆಯೆಂದು ಮಾಹಿತಿ ನೀಡಿದರು.

ಶೇಕಡಾ 80 ಮಂದಿ ಹೊರಕ್ಕೆ :

ಸಾಮಾನ್ಯವಾಗಿ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಶೇ.80 ರಷ್ಟು ಮಂದಿ ಅನುತ್ತೀರ್ಣರಾಗುತ್ತಾರೆ ಎಂದು ಮಾಹಿತಿ ನೀಡಿದ ಬ್ರಿಗೇಡಿಯರ್ ಪಿ.ಎಸ್.ಭಾಜ್ವಾ ಅವರು, ಮೊದಲ ಹಂತದ ಈ ರ್ಯಾಲಿಯಲ್ಲಿ ಆಯ್ಕೆಯಾದವರಿಗೆ ಬೆಂಗಳೂರಿನಲ್ಲಿ ಜುಲೈ 30 ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಬಳಿಕ ಮೆರಿಟ್ ಆಧಾರದಲ್ಲಿ ಆಯ್ಕೆಯನ್ನು ಪ್ರಕಟಿಸುವುದರೊಂದಿಗೆ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ವಿವಿಧ ರೆಜಿಮೆಂಟ್‍ಗಳಿಗೆ ಭರ್ತಿ ಮಾಡಲಾಗುತ್ತದೆ ಎಂದು ಸೈನ್ಯ ಭರ್ತಿ ರ್ಯಾಲಿಯ ಒಟ್ಟು ಪ್ರಕ್ರಿಯೆಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.

ಮತ್ತೆ ಆಯ್ಕೆಯಾಗಬಹುದು :

ಭಾರತೀಯ ಸೈನ್ಯಕ್ಕೆ 17 1/2 ಯಿಂದ 23 ವರ್ಷದೊಳಗಿನವರಿಗೆ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಲು ಅವಕಾಶವಿದೆ. ಇಂತಹ ರ್ಯಾಲಿಯಲ್ಲಿ ಪಾಲ್ಗೊಂಡು ಆಯ್ಕೆಯಲ್ಲಿ ವಿಫಲರಾಗುವವರು ನಿರಾಶರಾಗಲು ಕಾರಣವಿಲ್ಲ. ಪ್ರತಿವರ್ಷ ಇಂತಹ ರ್ಯಾಲಿಗಳು ನಡೆಯುತ್ತಿದ್ದು, ಮತ್ತೆ ಅಗತ್ಯ ಸಿದ್ಧತೆಗಳೊಂದಿಗೆ ಪಾಲ್ಗೊಂಡು ಸೈನ್ಯದ ಸೇವೆಗೆ ಭರ್ತಿಯಾಗುವ ಅವಕಾಶವಿದೆ ಎಂದರು.

ರ್ಯಾಲಿಯಲ್ಲಿನ ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ ಇವೆಲ್ಲವುಗಳಿಗೆ ಪೂರ್ವ ಸಿದ್ಧತೆ ಅಗತ್ಯವೆಂದ ಬ್ರಿಗೇಡಿಯರ್ ಪಿ.ಎಸ್.ಭಾಜ್ವಾ ಅವರು, ಸಿದ್ಧತೆಗಳಿಲ್ಲದಿದ್ದರೆ ಆಯ್ಕೆ ಕಷ್ಟಕರವಾಗುತ್ತದೆ. ದೈಹಿಕ ಪರೀಕ್ಷೆಯ ಓಟದ ಸ್ಪರ್ಧೆಯ ಸಂದರ್ಭವೆ ಬಹುತೇಕ ಅಭ್ಯರ್ಥಿಗಳು ಆಯ್ಕೆಯಿಂದ ಹೊರಬೀಳುತ್ತಾರೆ ಎಂದು ತಿಳಿಸಿದರು. ಪರೀಕ್ಷೆಗಳಲ್ಲಿ ಕೇವಲ ತೇರ್ಗಡೆವಾಗುವುದು ಮುಖ್ಯವಲ್ಲ, ಉತ್ತಮ ಅಂಕಗಳನ್ನು ಹೊಂದುವುದು ಅಗತ್ಯವೆಂದರು.

ಪಾರದರ್ಶಕ ಆಯ್ಕೆ ಪ್ರಕ್ರಿಯೆ :

ಸೈನ್ಯ ಭರ್ತಿ ರ್ಯಾಲಿ ಮುಕ್ತ ಮತ್ತು ಪಾರದರ್ಶಕವಾಗಿ ನಡೆಸಲಾಗುತ್ತದೆ. ಇಂತಹ ರ್ಯಾಲಿಯಲ್ಲಿ ಅಭ್ಯರ್ಥಿಯ ಆಯ್ಕೆಗೆ ಇತರರ ಯಾವುದೇ ಪ್ರಭಾವಗಳಿಗೆ ಅವಕಾಶವಿರುವುದಿಲ್ಲವೆಂದು ಸ್ಪಷ್ಟಪಡಿಸಿದರು.

ಸೈನ್ಯ ಭರ್ತಿ ರ್ಯಾಲಿಗೆ ಸಂಬಂಧಿಸಿದಂತೆ ಸೈನ್ಯಕ್ಕೆ ಸೇರ್ಪಡೆಗೊಳಿಸುವುದಾಗಿ ಹಣದ ಆಮಿಷವನ್ನು ಮುಂದಿಡುವ ಮಧ್ಯವರ್ತಿಗಳಿಗೆ ಯಾರೂ ಬಲಿಯಾಗಬಾರದು. ಇಂತಹ ಮಧ್ಯವರ್ತಿಗಳಿಂದ ಸೈನ್ಯಕ್ಕೆ ಭರ್ತಿಯಾಗಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕದ ದಕ್ಷಿಣ ವಿಭಾಗದ ಡೈರೆಕ್ಟರ್ ಕರ್ನಲ್ ನವರತನ್, ಕೇರಳ ವಿಭಾಗದ ಡೈರೆಕ್ಟರ್ ಕರ್ನಲ್ ಚೌಹಾನ್, ಉತ್ತರ ಕರ್ನಾಟಕ ವಿಭಾಗದ ಡೈರೆಕ್ಟರ್ ಕರ್ನಲ್ ಸೆನೆಗಲ್ ಹಾಗೂ ಸೈನಿಕ ಕಲ್ಯಾಣ ಮಂಡಳಿಯ ಜಂಟಿ ನಿರ್ದೇಶಕರಾದ ಗೀತಾ ಉಪಸ್ಥಿತರಿದ್ದರು.

-ಕೆ.ಸಿ.ಐ/ಎನ್.ಬಿ.ಎನ್.

~~~

Leave a Reply

comments

Related Articles

error: