ದೇಶ

ಕಾಶ್ಮೀರ ಗಡಿಯುದ್ದಕ್ಕೂ ನೆಲದಡಿಯ ಬಂಕರ್ ನಿರ್ಮಿಸುತ್ತಿರುವ ಭಾರತೀಯ ಸೇನೆ

ಭಾರತೀಯ ಸೇನೆ ನಿಯಂತ್ರಣ ರೇಖೆಯ ಗಡಿಯುದ್ಧಕ್ಕೂ ನೆಲದಡಿಯ ಬಂಕರ್‍ ನಿರ್ಮಾಣ ಆರಂಭಿಸಿದೆ. ಅಣ್ವಸ್ತ್ರಸಜ್ಜಿತ ಚೀನಾ ಮತ್ತು ಪಾಕಿಸ್ಥಾನ ಕಾಶ್ಮೀರವನ್ನು ಕಬಳಿಸಲು ಹೊಂಚು ಹಾಕಿರುವ ಸಾಧ್ಯತೆಗಳು ದಟ್ಟವಾಗಿರುವ ಹಿನ್ನೆಲೆಯಲ್ಲಿ ಸಂಭಾವ್ಯ ದಾಳಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸೇನೆ ಎಲ್ಲ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎನ್ನಲಾಗಿದೆ.

ಕಳೆದ ಸೆ. 28ರಂದು ಉರಿಯಲ್ಲಿ ಭಾರತೀಯ ಸೇನಾ ಶಿಬಿರದ ಮೇಲೆ ಭೀಕರ ದಾಳಿಯ ನಂತರ ಕಾಶ್ಮೀರದ ನಿಯಂತ್ರಣರೇಖೆಯ ಉದ್ದಕ್ಕೂ ಸೇನೆ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಉರಿ ದಾಳಿಯಲ್ಲಿ 19 ಭಾರತೀಯ ಯೋಧರು ಮೃತಪಟ್ಟದ್ದು ದೇಶಾದ್ಯಂತ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದರ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್‍ ಆಕ್ರಮಿತ ಕಾಶ್ಮಿರದಲ್ಲಿ ಪಾಕಿಸ್ತಾನ ಸ್ಥಾಪಿಸಿದ್ದ ಭಯೋತ್ಪಾದಕ ಶಿಬಿರಗಳ ಮೇಲೆ ನಿರ್ದಿಷ್ಟ ದಾಳಿ ನಡೆಸಿ 40 ರಿಂದ 60 ಉಗ್ರಗಾಮಿಗಳನ್ನು ಹತ್ಯೆಗೈದಿತ್ತು. ಇದರಿಂದ ಎಚ್ಚೆತ್ತ ಪಾಕಿಸ್ತಾನ ಕಾಶ್ಮೀರ ಗಡಿಯತ್ತ ಹೆಚ್ಚಿನ ಸೇನೆ ಜಮಾವಣೆ ಮಾಡಿದೆ ಎಂದು ವರದಿಯಾಗಿದ್ದು, ನಿರ್ದಿಷ್ಟ ದಾಳಿಯ ನಂತರವೂ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿದೆ. ಇದಲ್ಲದೆ ರಾತ್ರಿ ಸಮಯ ಭಾರತೀಯ ಸೇನೆಯ ಮೇಲೆ ದಾಳಿ ನಡೆಸುವುದು ಹೆಚ್ಚಾಗಿದೆ.

ಉರಿ ಸೇನಾ ನೆಲೆಯ ಮೇಲೆ ಪಾಕ್‍ಪ್ರೇರಿತ ಉಗ್ರರು ಸುಲಭದ ದಾಳಿ ನಡೆಸಿ ಯೋಧರನ್ನು ಕೊಂದು ಹಾಕಿದ್ದರಿಂದ ಫಿದಾಯಿನ್ ದಾಳಿ ಎದುರಿಸುವ ಹಲವಾರು ರಕ್ಷಣಾ ಕ್ರಮಗಳನ್ನು ಭಾರತೀಯ ಸೇನೆ ಕೈಗೊಳ್ಳುತ್ತಿದೆ.

Leave a Reply

comments

Related Articles

error: