ಮೈಸೂರು

ಪೋಷಕರು ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು: ಮಣಿಕಾಂತ್

ಮೈಸೂರು, ಜೂ.1: ಪ್ರತಿಯೊಬ್ಬರು ತಮ್ಮ ಮಕ್ಕಳ ಕುರಿತು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಅವುಗಳನ್ನು ಸಾಕಾರಗೊಳಿಸಬೇಕಾದರೆ ಮಕ್ಕಳ ಸುಪ್ತ ಪ್ರತಿಭೆಗಳನ್ನು ಗುರುತಿಸಿ ನೀರೆರೆದು ಪೋಷಿಸಬೇಕು ಎಂದು ಪತ್ರಕರ್ತ ಎ.ಆರ್.ಮಣಿಕಾಂತ್ ಅಭಿಪ್ರಾಯಪಟ್ಟರು.

ಮಾನಸಗಂಗೋತ್ರಿಯ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ ಆಯುಷ್‌ನ ಪಂಚವಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಮೇ ಮಸ್ತಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಮಗುವಿನಲ್ಲಿಯೂ ಒಂದಲ್ಲಾ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಹೊರತೆಗೆಯುವ ಕೆಲಸವನ್ನು ಪೋಷಕರು ಮಾಡಬೇಕು. ಜತೆಗೆ ಪ್ರತಿಯೊಂದು ವಿಷಯದ ಕುರಿತು ಸಮಾಧಾನದಿಂದ ಕಲಿಸುವ ಮನೋಭಾವ ಹೊಂದಿರಬೇಕು. ಮಕ್ಕಳಿಗೆ ಮಾತು ಬಾರದೇ ಇದ್ದಾಗ ಪೋಕಷರು ಆತಂಕಗೊಳ್ಳದೆ ಆಯುಷ್ ಗೆ ಕರೆತಂದು ಸೂಕ್ತ ಚಿಕಿತ್ಸೆ ಕೊಡಿಸಬೇಕು. ಮಾತು ಬಾರದ ಮಗುವಿನಲ್ಲೂ ಅನನ್ಯ ಪ್ರತಿಭೆಯಿದ್ದು, ಆತಂಕಗೊಳ್ಳದೆ ತಾಳ್ಮೆಯಿಂದ ಕಲಿಸುವ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಆಯುಷ್ ನಿರ್ದೇಶಕಿ ಪ್ರೊ.ಎಸ್.ಆರ್.ಸಾವಿತ್ರಿ, ವಿಶೇಷ ಶಿಕ್ಷಣ ವಿಭಾಗದ ಮುಖ್ಯಸ್ಥೆ ಡಾ.ಎಂ.ಪುಷ್ಪಾವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: