ಕರ್ನಾಟಕಪ್ರಮುಖ ಸುದ್ದಿ

ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬಹುಭಾಷಿಕತೆ ಕುರಿತ ಜಾಗತಿಕ ಬೌದ್ಧಿಕ ಕಮ್ಮಟ

ರಾಜ್ಯ (ಪ್ರಮುಖ ಸುದ್ದಿ) ಮಂಗಳೂರು, ಜೂನ್ 1 : ಮಂಗಳೂರು ವಿಶ್ವವಿದ್ಯಾನಿಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯು ಭಾರತ ಸರಕಾರದ ಪ್ರತಿಷ್ಠಿತ ಜಾಗತಿಕ ಮಟ್ಟದ ಶೈಕ್ಷಣಿಕ ಜಾಲದ (ಗ್ಲೋಬಲ್ ಇನಿಷಿಯೇಟಿವ್ ಆನ್ ಎಕಡೆಮಿಕ್ ನೆಟ್‍ವಕ್ – ಗ್ಯಾನ್) ಕಾರ್ಯಕ್ರಮದ ಆಶ್ರಯದಲ್ಲಿ ಜೂನ್ 5 ರಿಂದ ಜೂನ್ 16ರವರೆಗೆ “ಬಹುಭಾಷಿಕತೆ: ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಆಯಾಮಗಳು” ಎಂಬ ವಿಷಯದ ಕುರಿತು ಬೌದ್ಧಿಕ ಕಮ್ಮಟವೊಂದನ್ನು ಆಯೋಜಿಸಿದೆ.

ಬಹುಭಾಷಿಕತೆಯನ್ನು ಕುರಿತ ಇತ್ತೀಚಿನ ಸೈದ್ಧಾಂತಿಕ ಹಾಗೂ ಆನ್ವಯಿಕ ಸಂಶೋಧನೆಗಳನ್ನು, ಕರ್ನಾಟಕದಲ್ಲಿ ಬಹುಭಾಷಿಕತೆಗೆ ಸಂಬಂಧಿಸಿದ ಸಮಸ್ಯೆ ಮತ್ತು ಸಂಶೋಧನಾ ವಿಧಾನಕ್ರಮಗಳನ್ನು ಚರ್ಚಿಸುವ ಉದ್ದೇಶದಿಂದ ಈ ವಿಶೇಷ ತರಗತಿಯನ್ನು ರೂಪಿಸಲಾಗಿದೆ. ಮೂಲತಃ ಅಂತರ್‍ಶಿಸ್ತೀಯ ಮತ್ತು ಬಹುಶಿಸ್ತೀಯ ನೆಲೆಯ ವಿಷಯ ಇದಾಗಿದ್ದು, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ನ್ಯೂಯಾರ್ಕ್‍ನ ಸ್ಟೋನಿ ಬ್ರೂಕ್ ವಿಶ್ವವಿದ್ಯಾನಿಲಯದಲ್ಲಿ ಭಾರತ ಅಧ್ಯಯನದ ನಿರ್ದೇಶಕರಾಗಿರುವ ಪ್ರಖ್ಯಾತ ಭಾಷಾವಿಜ್ಞಾನಿ ಪ್ರೊ.ಎಸ್.ಎನ್. ಶ್ರೀಧರ್‍ರವರು ಈ ಕಮ್ಮಟದ ನಿರ್ದೇಶಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.

ಶೈಕ್ಷಣಿಕ ವಲಯದಲ್ಲಿ ತಮ್ಮ ಬರವಣಿಗೆ ಹಾಗೂ ಪಾಠಪ್ರವಚನಗಳಿಂದ ಪ್ರಸಿದ್ಧರಾಗಿರುವ ಪ್ರೊ. ಶ್ರೀಧರ್,  ಈ ಬಹುಶಿಸ್ತೀಯ ಕಮ್ಮಟದಲ್ಲಿ, ಹೇಗೆ ಬಹುಭಾಷಿಕತೆ ತಮ್ಮ ತಂತ್ರದ ಮೂಲಕ ಭಾರತದ ಸಾಮಾಜಿಕ ವಲಯಗಳ ಮೇಲೆ ಪ್ರಭಾವವನ್ನು ಬೀರುತ್ತವೆ ಎಂಬುದನ್ನು ತೋರಿಸಿಕೊಡುತ್ತಾರೆ.

ಅಂತೆಯೇ, ಬಹುಭಾಷಿಕತೆಯ ಪ್ರಭಾವ ಹೇಗೆ ಸಾಂಸ್ಕೃತಿಕ ಅಧ್ಯಯನ, ಅಭಿವೃದ್ಧಿ ಅಧ್ಯಯನ, ಮಾಧ್ಯಮ ಅಧ್ಯಯನ, ಮಾನವಶಾಸ್ತ್ರ, ಸಮಾಜಶಾಸ್ತ್ರ, ನರಶಾಸ್ತ್ರ, ಸ್ಪೀಚ್ ಪೆಥಾಲಜಿ, ಭಾಷಾ ಬೋಧನೆ, ಚರಿತ್ರೆ, ಶಿಕ್ಷಣ, ರಾಜಕಾರಣ, ಕಾನೂನು, ಉದ್ಯಮ, ಜಾಹಿರಾತು, ಮನೋರಂಜನೆ ಮೊದಲಾದ ಶಿಸ್ತುಗಳ ಮೇಲೆ ಪ್ರಭಾವ ಬೀರುವ ರೀತಿಗಳನ್ನು ವಿವರಿಸುತ್ತಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ.ಕೆ. ಭೈರಪ್ಪ ಅಧ್ಯಕ್ಷತೆಯಲ್ಲಿ ಹಳೆಯ ಸೆನೆಟ್ ಹಾಲ್‍ನಲ್ಲಿ ಜೂನ್ 5 ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾಗಿರುವ ಪ್ರೊ. ಬಿ ಎ ವಿವೇಕ ರೈ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕುಲಸಚಿವರಾದ ಪ್ರೊ.ಕೆ.ಎಂ. ಲೋಕೇಶ್ ಇವರು ಜೂನ್ 16 ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಈ ಕಮ್ಮಟದಲ್ಲಿ ದೇಶದಾದ್ಯಂತ ವಿದ್ಯಾರ್ಥಿಗಳು, ಸಂಶೋಧನ ವಿದ್ಯಾರ್ಥಿಗಳು, ಅಧ್ಯಾಪಕರು, ಮತ್ತಿತರ ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಆಸಕ್ತರು ಗ್ಯಾನ್ ಪೋರ್ಟಲ್‍ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡು, ಈ ಕೆಳಗಿನಂತೆ ವಿಶ್ವವಿದ್ಯಾನಿಲಯದ ನೋಂದಣಿ ಶುಲ್ಕ ಭರಿಸಿ ಕಮ್ಮಟದಲ್ಲಿ ಭಾಗವಹಿಸಬಹುದಾಗಿದೆ.

ವಿದ್ಯಾರ್ಥಿಗಳು- ರೂ. 500, ಸಂಶೋಧನ ವಿದ್ಯಾರ್ಥಿಗಳು ರೂ. 1000, ಅಧ್ಯಾಪಕರು-ರೂ 2000, ಕಂಪೆನಿಯ ಅಭ್ಯರ್ಥಿಗಳು ರೂ. 3000 ಹೆಚ್ಚಿನ ವಿವರಗಳಿಗೆ ಪ್ರೊ. ಬಿ. ಶಿವರಾಮ ಶೆಟ್ಟಿ (9448952011) ಕೋರ್ಸ್ ಸಂಯೋಜಕರು, ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ http://www.mangaloreuniversity.ac.in http://www.gian.iitkgp.ac.in ಇವರನ್ನು ಸಂಪರ್ಕಿಸಬಹುದು.

-ಎನ್.ಬಿ.ಎನ್.

Leave a Reply

comments

Related Articles

error: