ಪ್ರಮುಖ ಸುದ್ದಿಮೈಸೂರು

ಮೈಸೂರಿನಲ್ಲಿ ಅನೇಕ ಯೋಗ ಸಾಧಕರಿದ್ದಾರೆ: ರಾಘವೇಂದ್ರ ಪೈ

ವಿಶ್ವದಲ್ಲಿ ಭಾರತ ಯೋಗ ಭೂಮಿಯಾದರೆ, ಸಾಂಸ್ಕೃತಿಕ ನಗರಿ ಮೈಸೂರು ಯೋಗ ರಾಜಧಾನಿ. ಅನೇಕ ಮಹಾನ್ ಯೋಗ ಸಾಧಕರು ನಮ್ಮಲ್ಲಿದ್ದು ವಿಶ್ವಕ್ಕೆ ಯೋಗವನ್ನು ಪರಿಚಯಿಸುತ್ತಿದ್ದಾರೆ ಎಂದು ಯೋಗಪಟು ತರಬೇತುದಾರ ರಾಘವೇಂದ್ರ ಪೈ ಪ್ರತಿಪಾದಿಸಿದರು.

ದಸರಾ ಮಹೋತ್ಸವ ಅಂಗವಾಗಿ ಯೋಗ ದಸರಾ ಉಪ ಸಮಿತಿ ವತಿಯಿಂದ ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಯೋಗ ಸಮ್ಮೇಳನದಲ್ಲಿ ‘ಯೋಗದ ಮೂಲಕ ಮಾನಸಿಕ ಒತ್ತಡ ನಿವಾರಣೆ’ ಕುರಿತು ಮಾತನಾಡಿದ ಅವರು, ವಿಶ್ವಕ್ಕೆ ಭಾರತೀಯರ ಕೊಡುಗೆ ಅಪಾರ. ಅವುಗಳಲ್ಲಿ ಯೋಗ ಪ್ರಮುಖವಾಗಿ ನಿಲ್ಲುತ್ತದೆ. ಅನಾದಿ ಕಾಲದಿಂದಲೂ ಯೋಗಾಭ್ಯಾಸ ಮಾಡಿಕೊಂಡು ಬರುತ್ತಿದ್ದರೂ ಕಳೆದೆರಡು ವರ್ಷಗಳಿಂದ ವಿಶ್ವದೆಲ್ಲೆಡೆ ಯೋಗ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅಕ್ಕಮಹಾದೇವಿ, ಚನ್ನಮಲ್ಲಿಕಾರ್ಜುನ ಸೇರಿದಂತೆ ನೂರಾರು ಮಹಾನ್ ಸಾಧಕರು ಯೋಗದಿಂದಲೇ ವಿಶ್ವದೆಲ್ಲೆಡೆ ಜನಮಣ್ಣನೆ ಗಳಿಸಿದ್ದರು. ದೇಶದ ಪ್ರಮುಖ ರಾಜಮನೆತನಗಳಲ್ಲಿ ಒಂದಾದ ಮೈಸೂರು ಮಹಾಮನೆತನ ಯೋಗಕ್ಕೆ ವಿಶೇಷ ಕೊಡುಗೆ ನೀಡಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ರಚಿಸಿರುವ ಶ್ರೀ ತತ್ವ ನಿಧಿ ಕೃತಿಯಲ್ಲಿ ಯೋಗಾಸನದ 221 ಚಿತ್ರಗಳಿದ್ದು, ಜಗನ್ಮೋಹನ ಅರಮನೆಯಲ್ಲಿ ಯೋಗಕ್ಕೆ ಸಂಬಂಧಿಸಿದ ಕೆಲ ಭಾವಚಿತ್ರಗಳಿವೆ ಎಂದು ತಿಳಿಸಿದರು.

ಮನಸ್ಸಿನ ಅತಿಯಾದ ವೇಗವೇ ಒತ್ತಡ. ಯೋಗ ಈ ವೇಗದ ಒತ್ತಡದ ನಿವಾರಣೆಗೆ ಬಹಳ ಅತ್ಯಗತ್ಯ. ಭೌತಿಕ, ಮಾನಸಿಕ, ಶಾರೀರಿಕವಾಗಿ ಸದೃಢರಾಗಲು, ಒತ್ತಡವನ್ನು ನಿಯಂತ್ರಿಸಿ ಸಮತೋಲಿತ ಮನುಷ್ಯನಾಗಲು ಯೋಗಾಭ್ಯಾಸ ಅನಿವಾರ್ಯ. ನಮ್ಮ ಮನಸ್ಸು ಅತೀ ಚಂಚಲ, ಏಕಾಗ್ರತೆ, ವಿಶಾಲ. ಹಾಗೆಯೇ ಸುಖ, ದುಖಃಗಳೆಲ್ಲವನ್ನೂ ತಡೆದುಕೊಳ್ಳುವ ಶಕ್ತಿ ಇರುವುದು ಮನಸ್ಸಿಗೆ ಮಾತ್ರ. ಹಾಗಾಗಿ ಮನಸ್ಸನ್ನು ನಿಯಂತ್ರಿಸಲು ಯೋಗದಿಂದ ಮಾತ್ರ ಸಾಧ್ಯವಿದ್ದು, ಧನಾತ್ಮಕ ಒತ್ತಡವನ್ನು ವೃದ್ಧಿಸಿ ಎಲ್ಲವನ್ನೂ ತಡೆದುಕೊಳ್ಳುವ ಪರಿಪೂರ್ಣ ವ್ಯಕ್ತಿಯನ್ನಾಗಿ ಯೋಗ ರೂಪಿಸುತ್ತದೆ. ವಯಸ್ಸಿನ ಇತಿಮಿತಿಯಿಲ್ಲದೆ ಎಲ್ಲರೂ ಯೋಗ ಮಾಡಬಹುದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಂಚನಗಂಗಾ, ರುದ್ರಸ್ವಾಮಿ ಅವರು ವಿವಿಧ ಯೋಗಾಸನಗಳನ್ನು ಮಾಡಿ ಯೋಗದ ಮಹತ್ವವನ್ನು ಸಾರಿದರು. ವಿಚಾರ ಸಂಕಿರಣ ಅಂಗವಾಗಿ ಯೋಗ ಅಧಿವೇಶನಗಳನ್ನು ನಡೆಸಲಾಯಿತು. ಜೆಎಸ್‌ಎಸ್ ಮನಶಾಸ್ತ್ರ ವಿಭಾಗದ ಪ್ರೊ.ಟಿ.ಎಸ್.ಸತ್ಯನಾರಾಯಣ ರಾವ್, ಬೆಂಗಳೂರಿನ ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಸಿ.ಹರೀಶ್‌ಬಾಬು, ಸೌಮ್ಯ ಮಹೇಶ್ ಪಂಡಿತ್ ಅವರು ಅಧಿವೇಶನ ನಡೆಸಿಕೊಟ್ಟರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮದ್, ತಾಲೂಕು ಪಂಚಾಯತ್ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಯೋಗ ದಸರಾ ಉಪ ಸಮಿತಿ ವಿಶೇಷಾಧಿಕಾರಿ ಹಾಗೂ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಲಾ ಕೃಷ್ಣಸ್ವಾಮಿ, ಕಾರ್ಯಾಧ್ಯಕ್ಷ ಎಂ.ಎನ್.ನಟರಾಜ್, ಕಾರ್ಯದರ್ಶಿ ಡಾ.ಬಿ.ಎನ್.ಸೀತಾಲಕ್ಷ್ಮಿ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

comments

Related Articles

error: