
ಪ್ರಮುಖ ಸುದ್ದಿಮೈಸೂರು
ಜೂ.12 ಕ್ಕೆ ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ಕರೆ
ಮೈಸೂರು, ಜೂ.2: ವಿವಿಧ ಬೇಡಿಕೆಗಳನ್ನು ಈಡೇರಿಸುಂತೆ ಒತ್ತಾಯಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಜೂನ್ 12 ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.
ಶುಕ್ರವಾರ ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮತ್ತು ಬಸ್ ಚಾಲಕರಿಗೆ ಪ್ರಚಾರ ಮಾಡುವ ಮುಖಾಂತರ ವಿನೂತನ ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅನೇಕ ಸಮಸ್ಯೆಗಳಿದ್ದರೂ ಯಾವ ಪಕ್ಷವೂ ಸಹ ಪ್ರಾಮಾಣಿಕವಾದ ಹೋರಾಟ ಮಾಡುತ್ತಿಲ್ಲ. ಮುಂದಿನ ವರ್ಷ ಬರಲಿರುವ ಚುನಾವಣೆಗೆ ಸಿದ್ಥತೆ ಮಾಡಿಕೊಳ್ಳುವ ಭರದಲ್ಲಿದ್ದಾರೆಯೇ ಹೊರತು ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ರಾಯಚೂರಿನಲ್ಲಿ ಮಹಾದಾಯಿ ಮತ್ತು ಕಳಸಾ ಬಂಡೂರಿ ಹೋರಾಟ ನಡೆಯುತ್ತಿದೆ. ಇದೊಂದು ಪ್ರಬುದ್ಧವಾದ ಚಳುವಳಿ. ಸತತ 2 ವರ್ಷಗಳಿಂದ ಚಳುವಳಿ ನಡೆಸುತ್ತಿದ್ದಾರೆ. ಹಿಂದಿನ ಪಾರ್ಲಿಮೆಂಟ್ ನ ಸದಸ್ಯರಲ್ಲಿ ವಿಧೇಯತೆ ಇತ್ತು. ಆದರೆ ಇಂದಿನ ಪಾರ್ಲಿಮೆಂಟ್ ಸದಸ್ಯರು ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿಲ್ಲ. ಬಿಜೆಪಿ ಪಾರ್ಲಿಮೆಂಟ್ ಸದಸ್ಯರು ಮನಸ್ಸು ಮಾಡಿದ್ದರೆ ಬಹಳ ಬೇಗ ಕಳಸಾ ಬಂಡೂರಿ ಮತ್ತು ಮಹಾದಾಯಿ ಹೋರಾಟಕ್ಕೆ ಜಯ ಸಿಗುತ್ತಿತ್ತು. ಆದರೆ ಇವರು ಕೈ ಚೆಲ್ಲಿ ಕುಳಿತಿದ್ದಾರೆ. ಹೀಗಾಗಿ ಜೂನ್ 12 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ಅಂತರರಾಜ್ಯ ಬಸ್ ಗಳನ್ನು ತಡೆದು ಬಂದ್ ಗೆ ಸಹಕರಿಸುವಂತೆ ವಾಟಾಳ್ ಮನವಿ ಮಾಡಿದರು. (ವರದಿ: ಕೆ.ಎಸ್, ಹೆಚ್.ಎನ್, ಎಲ್.ಜಿ)