ದೇಶಪ್ರಮುಖ ಸುದ್ದಿವಿದೇಶ

ಹವಾಮಾನ ಬದಲಾವಣೆ ಒಪ್ಪಂದಿಂದ ಹಿಂದೆ ಸರಿದ ಡೊನಾಲ್ಡ್ ಟ್ರಂಪ್ ; ಹಲವು ರಾಷ್ಟ್ರಗಳಿಂದ ಖಂಡನೆ

ದೇಶ-ವಿದೇಶ (ಪ್ರಮುಖ ಸುದ್ದಿ) ವಾಷಿಂಗ್ಟನ್, ಜೂ. 2 : ಹವಾಮಾನ ಬದಲಾವಣೆಗೆ ತಡೆ ಒಡ್ಡುವ ನಿಟ್ಟಿನಲ್ಲಿ ವಿಶ್ವದ 190 ರಾಷ್ಟ್ರಗಳು ಸಮಾಲೋಚಿಸಿ ಮಾಡಿಕೊಂಡಿದ್ದ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ.

ಫ್ರಾನ್ಸ್, ಜರ್ಮನಿ ಮತ್ತು ಇಟಲಿ ದೇಶಗಳ ನಾಯಕರು ಜಂಟಿ ಹೇಳಿಕೆ ಹೊಡಿಸಿ ಮತ್ತೆ ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಪ್ಯಾರಿಸ್ ಒಪ್ಪಂದದ ಸಮಯದಲ್ಲಿ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರು ಕೂಡ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಟೀಕಿಸಿದ್ದು, ಟ್ರಂಪ್ಸ್ ಸರ್ಕಾರ ಮುಂದಿನ ದಿನಗಳಲ್ಲಿ ಇಕ್ಕಟ್ಟಿಗೆ ಸಿಲುಕಬಹುದು ಎಂದು ಎಚ್ಚರಿಸಿದ್ದಾರೆ.

ಆದರೆ, “ಪ್ಯಾರಿಸ್ ಒಪ್ಪಂದದಿಂದ ಚೀನಾ ಹಾಗೂ ಭಾರತದಂಥ ದೇಶಗಳು ಲಾಭ ಪಡೆಯುತ್ತಿವೆ. ಇದರಿಂದ ಅಮೆರಿಕದ ಹಿತಾಸಕ್ತಿಗೆ ಹಾನಿ ಉಂಟಾಗಲಿದೆ. ದೇಶದ ವಹಿವಾಟು ಹಾಗೂ ಉದ್ಯೋಗ ಕ್ಷೇತ್ರಕ್ಕೆ ತೀವ್ರ ತೊಂದರೆಯಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಅವರ ಈ ನಿರ್ಧಾರವನ್ನು ಹಲವು ದೇಶಗಳ ಮುಖಂಡರು ಖಂಡಿಸಿದ್ದಾರೆ. ಯುರೋಪಿಯನ್ ಕಮಿಷನ್ ಅಧ್ಯಕ್ಷ ಜೀನ್ ಕ್ಲಾಡ್ ಜಂಕರ್, ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ ಸಂಪೂರ್ಣ ತಪ್ಪು ಎಂದು ಟ್ವಿಟ್ಟರ್‍ನಲ್ಲಿ ಖಂಡಿಸಿದ್ದಾರೆ.

ಭಾರತ, ಚೀನಾಗೆ ಲಾಭ – ಅಮೆರಿಕಕ್ಕೆ ನಷ್ಟ !

ಇದಾವುದಕ್ಕೂ ಬೆಲೆ ಕೊಡದ ಟ್ರಂಪ್ ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಒಬಾಮಾ ಸರ್ಕಾರ ಮಾಡಿಕೊಂಡ ಈ ಒಪ್ಪಂದದಲ್ಲಿ ಬದಲಾವಣೆಗೆ ಅವಕಾಶವಿದೆ. ಒಬಾಮಾ ಆಡಳಿತ ಸಹಿ ಮಾಡಿದ್ದ 190 ದೇಶಗಳು ಒಪ್ಪಿಕೊಂಡಿರುವ ಈ ಒಪ್ಪಂದದ ಬಗ್ಗೆ ಮರು ಸಂಧಾನ ಮಾತುಕತೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಪ್ಯಾರಿಸ್ ಒಪ್ಪಂದದ ಅನ್ವಯ, ಹವಾಮಾನ ಬದಲಾವಣೆ ತಡೆ ಯೋಜನೆಗಳಿಗೆ ಭಾರತ ಕೋಟ್ಯಂತರ ಡಾಲರ್ ನೆರವು ಪಡೆಯಲಿದೆ. ಬೀಜಿಂಗ್ ಹಾಗೂ ಹೊಸದಿಲ್ಲಿ ಕಲ್ಲಿದ್ದಲು ಆಧರಿತ ವಿದ್ಯುತ್ ಘಟಕಗಳ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಿವೆ. ಈ ಮೂಲಕ ಅಮೆರಿಕಕ್ಕಿಂತ ಹೆಚ್ಚಿನ ಹಣಕಾಸು ಲಾಭ ಪಡೆಯಲಿವೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕ ದೇಶದ ಜನರಿಗಾಗಿ ನಾನು ಪ್ರತೀ ಕ್ಷಣ ಹೋರಾಡುತ್ತೇನೆ. ಅಮೆರಿಕ ಮತ್ತು ಇಲ್ಲಿನ ನಾಗರಿಕರನ್ನು ಸಂರಕ್ಷಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳುವುದು ಅನಿವಾರ್ಯ ಎಂದಿದ್ದಾರೆ.

ಮತ್ತೆ ಆತಂಕ :

ಅಮೆರಿಕ ಅಧ್ಯಕ್ಷರ ಈ ನಿರ್ಧಾರದಿಂದಾಗಿ ಇಂಗಾಲದ ಹೊರಸೂಸುವಿಕೆಯ ಪ್ರಮಾಣ ಮತ್ತೆ ಏರುಪೇರಾಗುವ ಸಂಭವವಿದ್ದು, ಸಣ್ಣ ದ್ವೀಪರಾಷ್ಟ್ರಗಳು ಮತ್ತೆ ಆತಂಕ ಎದುರಿಸುವಂತಾಗಿದೆ. ಇದಲ್ಲದೆ ಕರಾವಳಿ ಅಂಚಿನ ನಗರಗಳಿಗೂ ಮುಳುಗಡೆಯ ಭೀತಿ ತಪ್ಪಿದ್ದಲ್ಲ.

-ಎನ್.ಬಿ.ಎನ್.

Leave a Reply

comments

Related Articles

error: