ದೇಶಪ್ರಮುಖ ಸುದ್ದಿವಿದೇಶ

ಬ್ರಹ್ಮಪುತ್ರಗೆ ತಡೆ: ಚೀನಾವನ್ನು ಕಟ್ಟಿಹಾಕದಿದ್ದರೆ ಭಾರತ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಕಾದಿದೆ ಅಪಾಯ

ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನಿ ಉಗ್ರರು ದಾಳಿ ನಡೆಸಿದ ನಂತರ ಭಾರತ ನಿರ್ದಿಷ್ಟ ದಾಳಿ ನಡೆಸಿ ಉಗ್ರರನ್ನು ಕೊಂದು ಹಾಕಿದ್ದು ನಿಜ. ಇದರ ಜೊತೆಗೆ ಪಾಕಿಸ್ತಾನಕ್ಕೆ ಆರ್ಥಿಕ ಮತ್ತು ರಾಜತಾಂತ್ರಿಕ ದಿಗ್ಬಂಧನ ವಿಧಿಸಿ ನಿಯಂತ್ರಣದಲ್ಲಿಡುವ ಭಾರತದ ಉದ್ದೇಶ ಸಾಧನೆಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದೆ.

ಪಾಕಿಸ್ತಾನಕ್ಕೆ ನೀಡಿರುವ “ಅತಿ ನೆಚ್ಚಿನ ರಾಷ್ಟ್ರ” ಸ್ಥಾನಮಾನವನ್ನು ರದ್ದುಗೊಳಿಸುವುದರ ಜೊತೆಗೆ ಜವಾಹರಲಾಲ್ ನೆಹರು ಮತ್ತು ಅಯೂಬ್ ಖಾನ್ ನಡುವೆ ಏರ್ಪಟ್ಟ ಸಿಂಧೂ ನದಿ ನೀರಿನ ಬಳಕೆ ಒಪ್ಪಂದವನ್ನು ಮರುಪರಿಶೀಲಿಸುವುದೂ ಸೇರಿದೆ. ಇದಾದ ನಂತರವೂ ಪಾಕಿಸ್ಥಾನದ ಬೆದರಿದಂತೆ ಕಾಣುತ್ತಿಲ್ಲ. ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ಉಗ್ರರ ಉಪಟಳ ನಿಂತಿಲ್ಲ.

ಸಿಂಧೂ ನದಿ ನೀರನ್ನು ಭಾರತ ತಡೆಹಿಡಿದರೆ ಪಾಕಿಸ್ತಾನದ ಕೃಷಿ ಮತ್ತು ನಿತ್ಯ ಜೀವನದ ಮೇಲೆ ನಕರಾತ್ಮಕ ಪರಿಣಾಮ ಉಂಟಾಗಿ ಆ ದೇಶದ ನಾಯಕರು ಮತ್ತು ಸೇನೆಯನ್ನು ತಹಬಂದಿಗೆ ತರಬಹುದು ಎಂದು ಕೇಂದ್ರ ಸರ್ಕಾರ ಅಂದಾಜಿಸಿತ್ತು. ಆದರೆ ಚೀನಾ ತನ್ನ ಪಾಕಿಸ್ತಾನಿ ಪರ ನಿಲುವನ್ನು ಮುಂದುವರಿಸಿದ್ದು, ಭಾರತದ ಪೂರ್ವೋತ್ತರ ರಾಜ್ಯಗಳಾದ ಅರುಣಾಚಲಪ್ರದೇಶ, ಅಸ್ಸಾಂನಲ್ಲಿ ಹೆಚ್ಚೂಕಮ್ಮಿ ಇದೇ ತೆರನಾದ ಪರಿಣಾಮ ಬೀರಬಹುದಾದ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಮಾಡುವ ಯೋಜನೆ ಪ್ರಕಟಿಸಿದೆ.

ಮಸೂದ್ ಅಜರ್‍ ನನ್ನು ವಿಶ್ವಸಂಸ್ಥೆಯಿಂದ ಉಗ್ರನೆಂದು ಘೋಷಣೆ ಮಾಡುವ ಭಾರತದ ಪ್ರಯತ್ನಕ್ಕೂ ವಿಶ್ವಸಂಸ್ಥೆಯ ಭದ್ರತಾಸಮಿತಿಯಲ್ಲಿನ ತನ್ನ ವೀಟೊ ಅಧಿಕಾರ ಅಡ್ಡತರುವ ಮೂಲಕ ಚೀನಾ ತಡೆ ನೀಡಿದೆ.

ಚೀನಾವನ್ನು ಅರಬ್ಬಿ ಸಮುದ್ರಕ್ಕೆ ಸಂಪರ್ಕಿಸುವ, ಆ ಮೂಲಕ ಹಿಂದೂ ಮಹಾಸಾಗರದ ವಹಿವಾಟುಗಳ ಮೇಲೆ ಹಿಡಿತ ಸಾಧಿಸುವ ಮಹತ್ವಕಾಂಕ್ಷೆಯ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‍ ಯೋಜನೆಯ ನೆಪ ಒಡ್ಡುತ್ತಿದ್ದರೂ, ಎರಡೂ ರಾಷ್ಟ್ರಗಳೂ ಭಾರತದ ಅಭಿವೃದ್ಧಿಗೆ ತಡೆಯೊಡ್ಡಿ, ಭಾರತವನ್ನು ನಿಯಂತ್ರಣದಲ್ಲಿರುವ ಅಥವಾ ವಿಭಜಿಸುವ ಗುಪ್ತ ಅಜೆಂಡಾ ಹೊಂದಿರುವುದು ಚೀನಾದ ನಡವಳಿಕೆಗಳಿಂದ ಸ್ಪಷ್ಟವಾಗುತ್ತಿದೆ.

ಚೀನಾದ ನಡೆಯ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ ಸರ್ಕಾರ, ಬ್ರಹ್ಮಪುತ್ರಾಗೆ ಚೀನಾ ಜಲಾಶಯ ನಿರ್ಮಿಸಿ ವಿದ್ಯುತ್‍ ಉತ್ಪಾದಿಸುವುದರಿಂದ ತನ್ನ ಹಿತಾಸಕ್ತಿಗೆ ಏನೂ ಧಕ್ಕೆ ಇಲ್ಲ ಎಂದಿದೆ. ಆದರೆ ಬ್ರಹ್ಮಪುತ್ರಾಗೆ ಚೀನಾ ತಡಯೊಡ್ಡುವುದರಿಂದ ಭಾರತ ಆತಂಕಪಡಲು ಅನೇಕ ಕಾರಣಗಳಿವೆ ಎನ್ನುತ್ತಾರೆ ಪರಿಸರ ತಜ್ಞರು ಮತ್ತು ವ್ಯೂಹಾತ್ಮಕ ನೀತಿ ನಿರೂಪಕರು.

ಚೀನಾ ಮತ್ತು ಭಾರತ ನಡುವೆ ಬ್ರಹ್ಮಪುತ್ರಾ ನದಿಯ ಕುರಿತು ಯಾವುದೇ ಒಡಂಬಡಿಕೆ ಏರ್ಪಟ್ಟಿಲ್ಲ. ಚೀನಾ ಬ್ರಹ್ಮಪುತ್ರಾದ ಮೇಲೆ ಹಿಡಿತ ಸಾಧಿಸಿದರೆ ಅಂತಾರಾಷ್ಟ್ರೀಯ ನಿಯಮಗಳನ್ನು ಗಾಳಿಗೆ ತೂರಿದಂತೆಯೇ ಸರಿ. ತನಗೆ ಬೇಡವೆಂದಾಗ ನೀರು ಸ್ಥಗಿತ ಗೊಳಿಸಿ ಬರಗಾಲ ಸೃಷ್ಟಿಸುವ ಮತ್ತು ಯುದ್ಧದಂತಹ ಸಮಯದಲ್ಲಿ ಯಾವುದೇ ಮುನ್ಸೂಚನೆ ಕೊಡದೆ ತಕ್ಷಣಕ್ಕೇ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಿದರೆ ಭಾರತದ ರಾಜ್ಯಗಳಲ್ಲಿ ಕೃತಕ ಪ್ರವಾಹ ಸೃಷ್ಟಿಯಾಗಬಹುದು.

ಹೀಗಾದಲ್ಲಿ ಭಾರತದ ಈಶಾನ್ಯ ರಾಜ್ಯಗಳ ಆರ್ಥಿಕ ಬೆಳವಣಿಗೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದ್ದು, ಯುದ್ಧದಂತಹ ಸಮಯದಲ್ಲಿ ಭಾರತೀಯ ಸೇನೆ ಪ್ರವಾಹ ನಿಯಂತ್ರಣದಲ್ಲಿ, ಅಥವಾ ಪ್ರವಾಹಕ್ಕೆ ಸಿಲುಕುವವರ ರಕ್ಷಣೆಯಲ್ಲಿ ತೊಡಗುವಂತೆ ಮಾಡಿ ಭಾರತೀಯ ಸೇನೆಯ ಬಲ ವಿಭಜಿಸಬಹುದು.

ಮುಂದುವರಿದು, ಟಿಬೆಟ್‍ ನಲ್ಲಿ ಹುಟ್ಟಿ ಹರಿಯುವ ಎಲ್ಲ ನದಿ ಉಪನದಿಗಳಿಗೆ ಚೀನಾ ಜಲಾಶಯ ನಿರ್ಮಿಸಿ ನೀರು ಹರಿವನ್ನು ತನಗಿಷ್ಟಬಂದಂತೆ ತಿರುಗಿಸುತ್ತಿದೆ. ಸಮುದ್ರ ಮಟ್ಟದಿಂದ 4.5 ಕಿಲೋಮೀಟರ್ ಸರಾಸರಿ ಎತ್ತರದಲ್ಲಿರುವ – ಪ್ರಪಂಚದ ಚಾವಣಿ ಎಂದೇ ಕರೆಯಲ್ಪಡುವ ಟಿಬೆಟಿಯನ್ ಭೂಖಂಡದಲ್ಲಿ ಇದರಿಂದ ಉಂಟಾಗಬಹುದಾದ ಪ್ರಾಕೃತಿಕ ಏರುಪೇರುಗಳು ಮತ್ತು ಇದರಿಂದ ಉಂಟಾಗಬಹುದಾದ ಅಪಾಯ ಊಹೆಗೂ ನಿಲುಕದಷ್ಟು ಭೀಕರ.

ಆಗ್ನೇಯ ಏಷ್ಯಾದ ಎಲ್ಲ ರಾಷ್ಟ್ರಗಳ ನದಿಗಳೂ ಬಹುತೇಕ ಟಿಬೆಟ್‍ನಲ್ಲಿ ತಮ್ಮ ಮೂಲಸ್ಥಾನ ಹೊಂದಿವೆ. ಹೀಗಾಗಿ ಚೀನಾದ ಘಾತಕ ಹೆಜ್ಜೆಗಳು ಭಾರತ ಮಾತ್ರವಲ್ಲದೇ ಇಡೀ ಆಗ್ನೇಯ ಏಷ್ಟಾ ರಾಷ್ಟ್ರಗಳಲ್ಲಿ ಪಾರಿಸಾರಿಕ ಕ್ಷೋಬೆಗೆ ಮುನ್ನುಡಿಯಾಗಬಹುದು. ಆದುದರಿಂದ ಚೀನಾದ ನಡೆ ಭಾರತಕ್ಕೆ ಮಾತ್ರ ಆತಂಕ ತಂದಿಲ್ಲ. ಬದಲಾಗಿ ಬಲೂಚಿಸ್ತಾನದಿಂದ ಹಿಡಿದು ಲಾವೋಸ್‍ ವರೆಗಿನ ಅಂತಾರಾಷ್ಟ್ರೀಯ ಸಮುದಾಯವೂ ಚೀನಾ ಮತ್ತು ಪಾಕಿಸ್ತಾನಗಳ ಅಪವಿತ್ರ ಮೈತ್ರಿಯಿಂದ ಸಂಕಷ್ಟಕ್ಕೆ ಸಿಲುಕುವ ಅಪಾಯ ಎದುರಾಗಿದೆ.

ಭಾರತ ಸೀಮಿತ ಹಿತಾಸಕ್ತಿಯನ್ನೇ ಗಮನಿಸುವುದಾದರೂ ಚೀನಾ ಬ್ರಹ್ಮಪುತ್ರಾ ನೀರು ಚಲನೆಯ ಮೇಲೆ ಹಿಡಿತ ಸಾಧಿಸುವುದರ ಮೂಲಕ ಅರುಣಾಚಲ ಪ್ರದೇಶದ ಮೇಲಿನ ತನ್ನ ವಾದಕ್ಕೆ ಮತ್ತಷ್ಟು ಬಲ ತುಂಬಿ ಭಾರತದ ಪೂರ್ವೋತ್ತರ ಗಡಿಗಳನ್ನೂ ವಿವಾದಾತ್ಮ ನೆಲೆಗೆ ಎಳೆದು ತರಬಹುದು. ಇತ್ತ ಪಶ್ಚಿಮದ ಗಡಿಯಲ್ಲಿ ಪಾಕಿಸ್ಥಾನಕ್ಕೆ ಶಸ್ತ್ರಾಸ್ತ್ರ ಪೂರೈಸಿ ಏಕಕಾಲಕ್ಕೆ ಎರಡೂ ಕಡೆ ಭಾರತ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರೆ ನಿಭಾಯಿಸುವುದು ಕಷ್ಟವಾಗಬಹುದು. ಇದನ್ನು ಚೀನಾದ ವ್ಯೂಹಾತ್ಮಕ ಕುತಂತ್ರ ಎಂದೇ ಭಾರತ ಭಾವಿಸಬೇಕು. ಈ ವಿಚಾರದಲ್ಲಿ ಅಂತಾರಾಷ್ಟ್ರೀಯ ಗಮನ ಸೆಳೆದು ಚೀನಾದ ಈ ಕ್ರಮಗಳನ್ನು ತಡೆಯದಿದ್ದಲ್ಲಿ, ಭಾರತ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳು ಮುಂದೆ ಇದಕ್ಕೆ ದುಬಾರಿ ಬೆಲೆ ತೆರಬೇಕಾಗಬಹುದು ಎಂಬುದು ರಕ್ಷಣಾ ತಜ್ಞರ ಅಭಿಮತ.

Leave a Reply

comments

Related Articles

error: