ಕರ್ನಾಟಕಮೈಸೂರು

ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಹೋರಾಟ : ವಿವಿಧ ಸಂಘಟನೆಗಳ ಬೆಂಬಲ

ಮೈಸೂರು,ಜೂ.2 : ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕೆಂದು ಆಗ್ರಹಿಸಿ ನಡೆಸಿದ ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ರಾಜ್ಯಾದ್ಯಂತ ಪೌರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ‘ಕೆಲಸ ನಿಲ್ಲಿಸಿ’ ನಡೆಸುವ ಪ್ರತಿಭಟನೆ ಮುಷ್ಕರವನ್ನು ಕರ್ನಾಟಕ ಪ್ರಗತಿ ಪರ ಸಂಘಟನೆ ಬೆಂಬಲಿಸುವುದು ಎಂದು ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಆರ್.ಲಕ್ಷ್ಮಣ್ ತಿಳಿಸಿದರು.

ಗುತ್ತಿಗೆ ಆಧಾರಿತ ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಜೂ.12ರಂದು ಜಿಲ್ಲಾಧಿಕಾರಿ ಕಛೇರಿ ಮುಂದೆ ನಡೆಯುವ ಮುಷ್ಕರಕ್ಕೆ ನಾಡಿನ ಪ್ರಗತಿಪರ ಚಿಂತಕರು, ಕನ್ನಡ ಹೋರಾಟಗಾರರು, ಸಾಹಿತಿಗಳು, ಜನಪ್ರತಿನಿಧಿಗಳು, ರೈತ ಸಂಘಟನೆಗಳು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಪಾಲ್ಗೊಳ್ಳುವರು ಇದೇ ಸಂದರ್ಭದಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ,  ರಾಜ್ಯದಲ್ಲಿ ಸುಮಾರು 35 ಸಾವಿರ ಪೌರ ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 20 ವರ್ಷಗಳಿಂದಲೂ ಖಾಯಂಗೊಳಿಸುವಂತೆ ಹೋರಾಟ ನಡೆಸುತ್ತಿದೆ. ಆದರೆ ಸರ್ಕಾರ ಕೇವಲ ಸುಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ  ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು, ಪೌರ ಕಾರ್ಮಿಕರ ಬೇಡಿಕೆಗಳನ್ನು ಕಡೆಗಣಿಸುತ್ತಿದೆ ಎಂದು ಬೇಸರಿಸಿದರು. ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಹಾಲಿ ಇರುವ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ರಾಜ್ಯ ಉಚ್ಛ ನ್ಯಾಯಾಲಯ ನೀಡಿದ ತೀರ್ಪುನ್ನು ರಾಜ್ಯ ಸರ್ಕಾರ ಸಂಪೂರ್ಣ ಗಾಳಿಗೆ ತೂರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗುತ್ತಿಗೆ ಪದ್ದತಿಯನ್ನು ರದ್ದುಪಡಿಸಿ ಖಾಯಂಗೊಳಿಸುವ ಬಗ್ಗೆ ಘೋಷಣೆ ಮಾಡಿದ್ದರೂ ಇಂದಿಗೂ ಅದು ಕಾರ್ಯ ರೂಪಕ್ಕೆ ಬಂದಿಲ್ಲ ಹಾಗೂ ರಾಜ್ಯದಲ್ಲಿ ಸಫಾಯಿ ಕರ್ಮಚಾರಿ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡದೇ ತಾತ್ಸಾರ ಮಾಡುತ್ತಿದ್ದು ಮೀಸಲು ಅನುದಾನವು ವ್ಯರ್ಥವಾಗುತ್ತಿದೆ ಎಂದರು.

ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ವಿಷಯವಾಗಿ ರಾಜ್ಯ ಸರ್ಕಾರ ತೋರಿರುವ ವಿಳಂಬ ನೀತಿಯನ್ನು ಖಂಡಿಸಿ ಆಯೋಜಿಸಿರುವ ಸಹಿ ಸಂಗ್ರಹ ಮುಷ್ಕರದಲ್ಲಿ ಸಾಹಿತಿಗಳಾದ ದೇವನೂರು ಮಹಾದೇವ, ಮೀರಾನಾಯಕ್, ಪ್ರೊ.ಕೆ.ಎಂ.ಜಯರಾಮಯ್ಯ, ಕೆ.ಎಸ್.ಭಗವಾನ್, ಅರವಿಂದ ಮಾಲಗತ್ತಿ, ಶಿವರಾಮ ಕಾಡನಕುಪ್ಪೆ, ಪ್ರೊ.ಸಿ.ರಾಮಸ್ವಾಮಿ, ರೈತ ಸಂಘದ ಬಡಗಲಪುರ ನಾಗೇಂದ್ರ, ದಲಿತ ವೆಲ್ ಫೇರ್ ಟ್ರಸ್ಟ್ ನ ಶಾಂತರಾಜು, ಸಮಾಜವಾದಿ ಮುಖಂಡ ಬಿ.ಕರುಣಾಕರ್, ಮಾಜಿ ಮೇಯರ್ ಪುರುಷೋತ್ತಮ್ ಹಾಗೂ ಹಲವಾರು ಸಂಘಟನೆಗಳು ಹೋರಾಟವನ್ನು ಬೆಂಬಲಿಸಿ ಜಿಲ್ಲಾಧಿಕಾರಿ ಕಚೇರಿ ಎಂದು ಧರಣಿ ಮುಷ್ಕರದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪುಟ್ಟಸಿದ್ದೇಗೌಡ, ಉಪಾಧ್ಯಕ್ಷ ಹೆಚ್.ಧರ್ಮರಾಜು ಮತ್ತು ಪ್ರಗತಿಸೇವಾ ಟ್ರಸ್ಟ್ ಉಪಾಧ್ಯಕ್ಷ ಎನ್.ಲೋಕೇಶ್ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್, ಎಲ್.ಜಿ)

Leave a Reply

comments

Related Articles

error: