ಮೈಸೂರು

ಡಾ.ರಾಜ್‍ಕುಮಾರ್ ಉದ್ಯಾನವನ ಅವ್ಯವಸ್ಥೆ ಸರಿಪಡಿಸುವಂತೆ ಬಿಜೆಪಿ ಯುವ ಮೋರ್ಚಾ ಒತ್ತಾಯ

ಮೈಸೂರು, ಜೂ.1 : ಮೈಸೂರು ನಗರದ ಹೃದಯ ಭಾಗದಲ್ಲಿರುವ ರಾಜ್‍ಕುಮಾರ್ ಉದ್ಯಾನವನದ ದುರವಸ್ಥೆ ಸರಿಪಡಿಸುವಂತೆ ಮೈಸೂರು ನಗರ (ಜಿಲ್ಲಾ) ಬಿಜೆಪಿ ಯುವ ಮೋರ್ಚಾ ಘಟಕದ ವತಿಯಿಂದ ಒತ್ತಾಯ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು.

ಈ ಕುರಿತು ಹಲವು ನಾಗರಿಕರ ಸಹಿ ಉಳ್ಳ ಮನವಿ ಪತ್ರವನ್ನು ಪಾಲಿಕೆ ಕಮಿಷನರ್‍ ಜಿ.ಜಗದೀಶ್ ಅವರಿಗೆ ಹಸ್ತಾಂತರಿಸಲಾಯಿತು.

ಉದ್ಯಾನವನದ ಸುತ್ತ ಇರುವ ಬೇಲಿ ಕಿತ್ತು ಹೋಗಿದೆ. ಇದರಿಂದ ಉದ್ಯಾನಕ್ಕೆ ಯಾವಕಡೆಯಿಂದಲಾದರೂ ನುಗ್ಗಿ ಬಂದು ಅನೈತಿಕ ಚಟುವಟಿಕೆ ನಡೆಸಲು ಅನುಕೂಲವಾಗಿದೆ. ಅಲ್ಲಲ್ಲಿ ಕುಡಿದ ಬಾಟಲ್‍ಗಳನ್ನು ಬಿಸಾಡಲಾಗಿದೆ.

ಉದ್ಯಾನವನದ ಒಳಗೆ ಕುಳಿತುಕೊಳ್ಳಲು ಹೆಚ್ಚಿನ ಬೆಂಚುಗಳಿರುವುದಿಲ್ಲ. ಕಸದ ಬುಟ್ಟಿಗಳ ವ್ಯವಸ್ಥೆ ಇಲ್ಲ. ವಾಕಿಂಗ್ ಪಾಥ್‍ನಲ್ಲಿ ಹಾಕಿರುವ ದೀಪಗಳು ಬೆಳಗುತ್ತಿಲ್ಲ. ಹನಿ ನೀರಾವರಿಗಾಗಿ ಅಳವಡಿಸಿರುವ ಪೈಪ್‍ಗಳು ದುರವಸ್ಥೆ ತಲುಪಿವೆ. ಅಲ್ಲಲ್ಲಿ ಕಸದ ರಾಶಿ ಕಾಣುತ್ತಿದೆ. ಸೂಕ್ತ ಶೌಚಾಲಯವಿಲ್ಲ. ಉದ್ಯಾನವನದ ಮಧ್ಯಭಾಗದಲ್ಲಿ ಇರುವ ಮೋರಿಯನ್ನು ಶುಚಿಗೊಳಿಸಿಲ್ಲ.

ಈ ಎಲ್ಲ ಅವ್ಯವಸ್ಥೆಗಳ ತಾಣವಾಗಿರುವ ಉದ್ಯಾನವಕ್ಕೆ ಚಿತ್ರಂಗದ ಮೇರು ವ್ಯಕ್ತಿತ್ವದ ನಟರಾದ ಡಾ.ರಾಜ್‍ಕುಮಾರ್ ಅವರ ಹೆಸರಿಡಲಾಗಿದೆ. ಪ್ರೇಕ್ಷಣೀಯ ಸ್ಥಳವಾಗಿ ಮೈಸೂರು ನಾಗರಿಕರು ಮತ್ತು ಪ್ರವಾಸಿಗರಿಗೆ ಮುದ ನೀಡಬೇಕಿದ್ದ ಉದ್ಯಾನವನ ಅವ್ಯವಸ್ಥೆಯ ಆಗರವಾಗಿರುವುದು ಖಂಡನೀಯ. ಕೂಡಲೇ ಉದ್ಯಾನವನದ ಈ ಎಲ್ಲ ದುರವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಯುವ ಮೋರ್ಚಾ ಮುಖಂಡರು ಒತ್ತಾಯಿಸಿದ್ದಾರೆ.

-ಎನ್.ಬಿ.ಎನ್.

Leave a Reply

comments

Related Articles

error: