ದೇಶಪ್ರಮುಖ ಸುದ್ದಿವಿದೇಶ

ಸುಷ್ಮಾ ಸ್ವರಾಜ್ ಸಹಾಯ : ಉಡುಪಿ ಮೂಲಕ ವ್ಯಕ್ತಿ ಮೊಜಾ಼ಂಬಿಕ್‍ನಿಂದ ಮರಳಿ ತವರಿಗೆ

ಉಡುಪಿ, ಜೂ.3 : ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಉಡುಪಿ ಮೂಲದ ವ್ಯಕ್ತಿ ತವರಿಗೆ ಮರಳಲು ಕ್ರಮ ವಹಿಸಿ ಸಹಾಯ ಮಾಡಿದ್ದಾರೆ.

26 ವರ್ಷದ ಆನಂದ್ ಸಿಂಗ್ ಅವರು ಆಗ್ನೇಯ ಆಫ್ರಿಕಾದ ಮೊಜಾಂಬಿಕ್ ದೇಶದಲ್ಲಿ ಆತನ ಮಾಲೀಕನಿಂದ ಹಲ್ಲೆಗೊಳಗಾಗಿದ್ದರು. ಆನಂದ್ ಸಿಂಗ್ ಸಹೋದರಿ ಅನಿತಾ ಸುವರ್ಣ ಅವರು ವಾರದ ಹಿಂದೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟರ್ ಮೂಲಕ ಮನವಿ ಮಾಡಿ ಸಹಾಯ ಕೋರಿದ್ದರು.

“9 ತಿಂಗಳಿಂದ ನನ್ನ ಸಹೋದರನಿಗೆ ಮಾಲೀಕ ವೇತನ ನೀಡಿಲ್ಲ, ನನ್ನ ಸಹೋದರ ಹಣ ಕದ್ದಿದ್ದಾನೆ ಎಂದು ಆರೋಪಿಸಿ ಕಂಪನಿ ಆತನ ಮೇಲೆ ಹಲ್ಲೆ ನಡೆಸಿ ಸಂಬಳ ನೀಡದೇ ದುಡಿಸಿ ಕಿರುಕುಳ ನೀಡುತ್ತಿದೆ” ಎಂದು ಟ್ವಿಟ್ಟರ್ ಮೂಲಕ ಹೇಳಿಕೊಂಡಿದ್ದರು.

“2015ರ ಅಕ್ಟೋಬರ್‍ನಲ್ಲಿ ಆನಂದ್ ಸಿಂಗ್ ಅವರು ಕೆಲಸಕ್ಕೆ ಸೇರುವಾಗ ತಿಂಗಳಿಗೆ 400 ಡಾಲರ್ ಸಂಬಳ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಕಳೆದ 9 ತಿಂಗಳಿನಿಂದ ಯಾವುದೇ ವೇತನ ಪಾವತಿಸಿಲ್ಲ, ಕ್ಯಾಶ್ ಬಾಕ್ಸ್ ನಿಂದ 9 ಲಕ್ಷ ಹಣ ಕಾಣೆಯಾಗಿದ್ದು, ಮೇ 29 ರಂದು ಹಣ ಕಳ್ಳತನವಾಗಿರುವ  ಕಂಪನಿಯ ಮಾಲೀಕನಿಗೆ ತಿಳಿಸಿದ್ದ. ಆದರೆ ಆನಂದ್ ಸಿಂಗ್ ಹಣ ಕದ್ದಿದ್ದಾನೆಂದು ಆರೋಪಿಸಿ ಆತನ ಮೇಲೆ ಹಲ್ಲೆ ಮಾಡಲಾಗಿದೆ. ಮಾಲೀಕನ ಮಗ ಆನಂದ್ ಸಿಂಗ್‍ಗೆ ಗನ್ ತೋರಿಸಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ಬೆದರಿಕೆ ಹಾಕಿದ್ದಾನೆ. ನನ್ನ ಸಹೋದರನ ಪಾಸ್ ಪೋರ್ಟ್ ಮತ್ತು ದಾಖಲೆಗಳನ್ನು ಕಿತ್ತುಕೊಂಡಿದ್ದಾರೆ” ಎಂದು ಸುಷ್ಮಾ ಅವರಲ್ಲಿ ನಿವೇದಿಸಿದ್ದರು.

“ಸಚಿವೆ ಸುಷ್ಮಾ ಸ್ವರಾಜ್ ಅವರ ಮಧ್ಯಸ್ಥಿಕೆಯಿಂದಾಗಿ ಮೊಜಾಂಬಿಕ್ ನಲ್ಲಿರುವ ಭಾರತೀಯ ರಾಯಭಾರಿ ಹನ್ಸರಾಜ್ ಸಿಂಗ್ ವರ್ಮಾ ಅವರು ನನ್ನ ಸಹೋದರನಿಗೆ ಸಹಾಯ ಮಾಡಿ ವಿಮಾನ ಹತ್ತಿಸಿದ್ದಾರೆ. ಶುಕ್ರವಾರ ರಾತ್ರಿ ಆನಂದ್ ಸಿಂಗ್ ಅವರು ಮುಂಬಯಿ ತಲುಪಿದ್ದಾರೆ. ಇದಕ್ಕಾಗಿ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಅನಿತಾ ಸುವರ್ಣ ಹೇಳಿದ್ದಾರೆ.

ಮೂಲತ ಮುಂಬಯಿಯವರಾದ ಆನಂದ್ ಸಿಂಗ್ ಅವರು ಕೆಲವು ವರ್ಷಗಳಿಂದ ಉಡುಪಿಯಲ್ಲಿ ನೆಲೆಸಿದ್ದಾರೆ. ಸುಷ್ಮಾ ಅವರ ಟ್ವೀಟ್‍ ಖಾತೆ ಸಕ್ರಿಯವಾಗಿದ್ದು, ಈ ಹಿಂದೆ ಕೂಡ ಇಂತಹುದೇ ಪ್ರಕರಣಗಳಲ್ಲಿ ಸುಷ್ಮಾ ಸ್ವರಾಜ್ ಅವರು ಟ್ವೀಟರ್ ಮೂಲಕ ಬಂದ ದೂರು-ಮನವಿಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.

-ಎನ್.ಬಿ.ಎನ್.

Leave a Reply

comments

Related Articles

error: