ಪ್ರಮುಖ ಸುದ್ದಿಮೈಸೂರು

ಎಲ್ಲರೂ ಒಟ್ಟಾಗಿ ಮುಂದಿನ ಚುನಾವಣೆ ಎದುರಿಸಬೇಕಾಗಿದೆ: ಡಾ.ಜಿ.ಪರಮೇಶ್ವರ್

ಮೈಸೂರು, ಜೂ.3: ಮೈಸೂರಿನ ಸುತ್ತೂರು ಮಠಕ್ಕೆ ಕೆಪಿಸಿಸಿ ಅಧ್ಯಕ್ಷ  ಡಾ. ಜಿ. ಪರಮೇಶ್ವರ್ ಭೇಟಿ ನೀಡಿ ಸುತ್ತೂರು ಶ್ರೀಗಳಿಗೆ ಫಲ ತಾಂಬೂಲ ನೀಡಿ ಆಶೀರ್ವಾದ ಪಡೆದರು. ನಂತರ ಸುತ್ತೂರು ಶ್ರೀಗಳೊಂದಿಗೆ ಅರ್ಧ ಗಂಟೆ ಗೌಪ್ಯ ಸಮಾಲೋಚನೆ ನಡೆಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಸುತ್ತೂರು ಮಠದೊಂದಿಗೆ ನಮ್ಮ ತಂದೆಯವರ ಕಾಲದಿಂದಲೂ ಉತ್ತಮ ಸಂಬಂಧವಿದೆ. ಮೈಸೂರಿಗೆ ಬಂದಾಗ ಶ್ರೀ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುವುದು ಸಂಪ್ರದಾಯ, ಹಾಗೆ ಭೇಟಿ ಮಾಡಿದ್ದೇನೆ. ಶ್ರೀಗಳ ಜೊತೆ ರಾಜಕೀಯದ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಹೇಳಿದರು.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆ ಅಮಾನವೀಯ ಕೃತ್ಯ ನಡೆಯಬಾರದಿತ್ತು. ಇದಕ್ಕೆ ಆಸ್ಪತ್ರೆ ಯ ವೈದ್ಯರು, ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ. ಹೀಗಾಗಿ  ಪತ್ನಿ ತನ್ನ ಗಂಡನನ್ನೆ ಕಾಲಿಡಿದು ಎಳೆದು ಹೋಗಿದ್ದಾರೆ. ಈ ಸಂಬಂಧ ಸಿಬ್ಬಂದಿಗಳ ಮೇಲೆ ವಿಚಾರಣೆ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ  ತವರು ಜಿಲ್ಲೆ ಎಂದು ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎನ್ನುವ ಆರೋಪ ಸರಿಯಲ್ಲ. ಇಂತಹ ವಿಚಾರಗಳಲ್ಲಿ ರಾಜಕೀಯ ಬೆರೆಸಬಾರದು ಎಂದರು.

ಉಪಮುಖ್ಯಮಂತ್ರಿ ಸ್ಥಾನ ಯಾಕೆ ಸಿಗಲಿಲ್ಲ ಎನ್ನುವುದು  ಈಗ ಅಪ್ರಸ್ತುತ.  ಪಕ್ಷದ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಮುಂದಿನ ಸಾರ್ವತ್ರಿಕ ಚುನಾವಣೆಯು ಸಿಎಂ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ನಡೆಯಲಿದೆ. ಅಧ್ಯಕ್ಷರಾಗಿ ನಾನು ರಾಜ್ಯ ಪ್ರವಾಸ ಮಾಡಿ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುತ್ತೇವೆ. ಮುಂದಿನ ಚುನಾವಣೆಗೆ ಆಧ್ಯಾತ್ಮಿಕ ಶಕ್ತಿ ಬೇಕಾಗಿದೆ.  ಹೀಗಾಗಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ನಮ್ಮ ಪಕ್ಷದ ಡಿ.ಕೆ. ಶಿವಕುಮಾರ್ ಆಗಲಿ ಅಥವಾ ಬೇರೆ ಯಾವ ನಾಯಕರು ಅಸಮಾಧಾನಗೊಂಡಿಲ್ಲ.  ಪಕ್ಷದ ಹಿರಿಯ ಮುಖಂಡರು, ಎಲ್ಲರೂ ಒಟ್ಟಾಗಿ ಮುಂದಿನ ಚುನಾವಣೆ ಎದುರಿಸಿ ಪಕ್ಷವನ್ನು ಗೆಲ್ಲಿಸಬೇಕಾಗಿದೆ ಎಂದು ಹೇಳಿದರು. (ವರದಿ: ಆರ್.ವಿ, ಎಸ್.ಎನ್/ಎಲ್.ಜಿ)
 

Leave a Reply

comments

Related Articles

error: