ಮೈಸೂರು

ಡೆಂಗ್ಯೂ ಜ್ವರ ಹಿನ್ನೆಲೆ ಖಾಸಗಿ ಆಸ್ಪತ್ರೆಗಳಲ್ಲಿ ಹಣ ಸುಲಿಗೆ : ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

ಮೈಸೂರು.ಜೂ.3 :  ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ದಾಖಲಾದ ರೋಗಿಗಳಿಗೆ ಡೆಂಗ್ಯೂ ಹೆಸರಿನಲ್ಲಿ ಹೆದರಿಕೆ ಹುಟ್ಟಿಸಿ ಸುಲಿಗೆ ಮಾಡಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಆಶ್ರಿತ ರೋಗಗಳ ಕಛೇರಿಯ ಜಿಲ್ಲಾ ಸಹಾಯಕ ಕೀಟ ಶಾಸ್ತ್ರಜ್ಞರಾದ  ಜಾನೆಟ್ ಮೆನೆಂಜಿಸ್ ತಿಳಿಸಿದರು.

ಶನಿವಾರ ನಗರದ  ಪತ್ರಕರ್ತರ ಭವನದಲ್ಲಿ  ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯಂಗವಾಗಿ ಇಲಾಖೆಯು  ಡೆಂಗ್ಯೂ ಹಾಗೂ ಚಿಕನ್ ಗೂನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮ ವಿವರಿಸಲು ಹಾಗೂ ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆ ಕುರಿತಂತೆ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಖಾಸಗಿ ಆಸ್ಪತ್ರೆಗಳು ದಾಖಲಾದ ರೋಗಿಗಳಿಗೆ ಡೆಂಗ್ಯೂ ಹೆಸರಿನಲ್ಲಿ ಹೆದರಿಕೆ ಹುಟ್ಟಿಸಿ ಸುಲಿಗೆ ನಡೆಸುತ್ತಿರುವುದು ನಗರದಲ್ಲಿ ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯಿಂದ ಯಾವ ಕ್ರಮ ಕೈಗೊಂಡಿದೆ ಎನ್ನವ ಪ್ರಶ್ನೆಗೆ ಉತ್ತರಿಸಿ ರೋಗ ಲಕ್ಷಣಗಳನ್ನು ಹೊಂದಿರುವ ರೋಗಿ ದಾಖಲಾದ ತಕ್ಷಣ ಆತನ ರಕ್ತದ ಮಾದರಿಯನ್ನು ಇಲಾಖೆಯ ಅಧಿಕೃತ ಹಾಗೂ ವಿಶ್ವಾಸರ್ಹವಾದ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಬೇಕು, ಅಲ್ಲಿ ಡೆಂಗ್ಯೂ ಎಂದು ದೃಢಪಟ್ಟರೆ ಮಾತ್ರ ಡೆಂಗ್ಯೂ ಎಂದು ತಿಳಿಸಬೇಕೆಂದು ಕಟ್ಟುನಿಟ್ಟಿನ ಸೂಚನೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಈ ಮೂಲಕ ನೀಡಿ. ಸುಳ್ಳು ವದಂತಿಗಳ ಮೂಲಕ ಸಾರ್ವಜನಿಕರಿಗೆ ಭಯಹುಟ್ಟಿಸಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಇಬ್ಬರು ಡೆಂಗ್ಯೂ ರೋಗಿಗಳ ಸಾವಾಗಿರುವ ಬಗ್ಗೆ ಇಲಾಖೆಯ ಗಮನಕ್ಕೆ ಬರಲಾಗಿದ್ದು ಅದು ಕೇವಲ ಶಂಕಾಸ್ಪದವಾಗಿದ್ದು, ಸಾವಿಗೆ ಡೆಂಗ್ಯೂ ಕಾರಣವೆಂದು ದೃಢಪಟ್ಟಿಲ್ಲವೆಂದರು. ನಗರದ ಹಲವಾರು ಖಾಸಗಿ ಆಸ್ಪತ್ರೆಗಳಿಂದ ಸುಮಾರ 266ಕ್ಕೂ ಹೆಚ್ಚು ಶಂಕಿತ ಡೆಂಗ್ಯೂ ಪ್ರಕರಣಗಳ ರಕ್ತ ಮಾದರಿಯು ಪರೀಕ್ಷೆಗಾಗಿ ಇಲಾಖೆಯ ಪ್ರಯೋಗಾಲಯಕ್ಕೆ ಬಂದಿದ್ದು,  ಅವುಗಳಲ್ಲಿ ಕೇವಲ 51 ಡೆಂಗ್ಯೂ ಎಂದು ಖಚಿತವಾಗಿದ್ದು ಉಳಿದವು ನೆಗೆಟಿವ್ ಆಗಿವೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ, ಆದ್ದರಿಂದ ಸಾರ್ವಜನಿಕರು ರೋಗದ ಬಗ್ಗೆ ಭಯಭೀತರಾಗದೆ ಜಾಗೃತರಾಗಬೇಕೆಂದು ಕರೆ ನೀಡಿದರು.

ಸ್ವಚ್ಚತೆ ಕಾಪಾಡಿ :  ಮೈಸೂರು ನಗರ ಸೇರಿದಂತೆ ನಂಜನಗೂಡು, ಟೀ ನರಸೀಪುರ ಒಟ್ಟು 42 ಪ್ರಕರಣಗಳು ಹಾಗೂ ಗ್ರಾಮೀಣ ಭಾಗದಲ್ಲಿ  29 ಡೆಂಗ್ಯೂ ಪ್ರಕರಣ ದಾಖಲಾಗಿವೆ ಎಂದು ಅಂಕಿ ಅಂಶಗಳನ್ನು ನೀಡಿ , ಡೆಂಗ್ಯೂ ಕೇವಲ ಕೊಳಚೆ ಪ್ರದೇಶದಲ್ಲಷ್ಟೇ ಅಲ್ಲ,  ಪ್ರತಿಷ್ಠಿತ ಬಡಾವಣೆಗಳಲ್ಲಿಯೂ ತೀವ್ರವಾಗಿ ಹರಡುತ್ತಿದೆ. ಮಳೆಗಾಲದಲ್ಲಿ ತ್ಯಾಜ್ಯ ವಸ್ತುಗಳಲ್ಲಿ ಶೇಖರಣೆಯಾಗುವ  ನೀರಿನಲ್ಲಿ ಈಡೀಸ್ ಸೊಳ್ಳೆಗಳ ಸಂತತಿ ಬೆಳೆಯುತ್ತವೆ. ಇದರಿಂದ ಹೂವಿನ ಕುಂಡಗಳು, ಶೋ ಪೀಸ್, ಏರ್ ಕೂಲರ್ ಸೇರಿದಂತೆ ಮನೆಯ ಸುತ್ತಮುತ್ತ ನೀರು ಶೇಖರಣೆಯಾಗುವುದನ್ನು ನಿಯಂತ್ರಿಸಿ ಸ್ವಚ್ಚತೆಯನ್ನು ಕಾಪಾಡಬೇಕು.  ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚತೆಯಿಂದಿರಿಸಿ. ಮಳೆಗಾಲವಾದ್ದರಿಂದ ಸಾಂಕ್ರಾಮಿಕ ರೋಗಗಳ ಭೀತಿಯೂ ಹೆಚ್ಚಾಗಿದ್ದು ವಾರದಲ್ಲೊಮ್ಮೆ ನೀರು ಶೇಖರಣೆ ಮಾಡುವ ಎಲ್ಲಾ ವಸ್ತುಗಳನ್ನು ಸ್ವಚ್ಚಗೊಳಿಸಿ ಸೊಳ್ಳೆ ಸಂತತಿಯನ್ನು ನಿಯಂತ್ರಿಸಿ ಎಂದು ತಿಳಿಸಿದರು.

ಮೂರು ದಿನಗಳಿಗೆ ಹೆಚ್ಚು ಕಾಲ ಜ್ವರ, ಮೈಕೈ ನೋವು ಕಂಡು ಬಂದರೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಇಲಾಖೆಗೆ ಮಾಹಿತಿ ನೀಡಿ, ರೋಗಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು. ರೋಗದ ಬಗ್ಗೆ ಸಾರ್ವಜನಿಕರು ಅನಗತ್ಯವಾಗಿ ಗಾಬರಿಯಾಗುವುದಕ್ಕಿಂತ ಮುಂಜಾಗ್ರತೆಯಿಂದ ಎಚ್ಚರಿಕೆ ಕ್ರಮ ವಹಿಸಿ ಎಂದು ಕರೆ ನೀಡಿದರು. ಜೂನ್ ತಿಂಗಳನ್ನು ಮಲೇರಿಯಾ ಹಾಗೂ ಜುಲೈ ಅನ್ನು ಡೆಂಗ್ಯೂ ವಿರೋಧಿ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಮೇಲ್ವಿಚಾರಕ ಜಿ.ಭೀಮಣ್ಣ, ಹಿರಿಯ ಆರೋಗ್ಯ ಪರಿವೀಕ್ಷಕರಾದ ರಾಜೇಂದ್ರ, ಚಿಕ್ಕಣ್ಣ ಮತ್ತು ವೇಣುಗೋಪಾಲ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್, ಎಲ್.ಜಿ)

Leave a Reply

comments

Related Articles

error: