ಮೈಸೂರು

ಪರಿಸರ ಪ್ರೇಮ ಜೂ.5ಕ್ಕೆ ಮಾತ್ರ ಸೀಮಿತವಲ್ಲ, ದಿನವೂ ಪರಿಸರ ದಿನಾಚರಣೆಯನ್ನಾಚರಿಸಿ ಮಾದರಿಯಾಗಿದ್ದಾರೆ ಇನ್ಸಪೆಕ್ಟರ್ ಸುನಿಲ್!

ಮೈಸೂರು, ಜೂ.5:- ಪೊಲೀಸರೆಂದರೆ ಕಠಿಣ ಹೃದಯಿಗಳು ಅವರಿಗೆ ಮನುಷ್ಯತ್ವವೇ ಇಲ್ಲ ಅಂತ ಅಂದುಕೊಳ್ಳೋರೇ ಜಾಸ್ತಿ ಆದರೆ ಇಲ್ಲೊಬ್ಬರು ಪೊಲೀಸ್ ಇನ್ಸಪೆಕ್ಟರ್ ಇದ್ದಾರೆ ಅವರು ಹಸಿರುಪ್ರೇಮಿ ಅರ್ಥಾತ್ ಪರಿಸರ ಪ್ರೇಮಿ. ಖಾಲಿ ಜಾಗ ಕಾಣಿಸಿದಲ್ಲೆಲ್ಲ ಸಸಿ ನೆಟ್ಟು ನೀರೆರೆಯೋದೆ ಇವರ ಹವ್ಯಾಸವಂತೆ.

ಅವರೇ ಮೇಟಗಳ್ಳಿ ಇನ್ಸಪೆಕ್ಟರ್ ಸುನಿಲ್. ಇವರು ತಮ್ಮ ಠಾಣಾ ವ್ಯಾಪ್ತಿಯ ಸುತ್ತಮುತ್ತಲೂ ಗಿಡಗಳನ್ನು ಸಸಿಗಳನ್ನು ನೆಟ್ಟು ಅದರ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಅವರು ಈ ಹಿಂದೆ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಇದ್ದಾಗಲೂ ಸಹ ಸಸಿಗಳನ್ನು ಸುತ್ತಮುತ್ತಲ ಪರಿಸರದಲ್ಲಿ ನೆಡುತ್ತಿದ್ದರಲ್ಲದೇ ಬಂಧಿತ ರೌಡಿಗಳಿಂದ ಅವುಗಳಿಗೆ ನೀರುಣಿಸಿ ಪೋಷಿಸುತ್ತಿದ್ದರು. ಸಿಸಿಬಿಯಾಗಿ ಬಂದ ಸಮಯದಲ್ಲಿಯೂ ಇವರ ಹಸಿರೀಕರಣ ನಿಂತಿರಲಿಲ್ಲ. ವಿಜಯನಗರ ಬಳಿ ಗಿಡಗಳನ್ನು ಬೆಳೆಸಿದ್ದಾರೆ. ಇವರು ಓದಿದ್ದು ಇಂಜಿನಿಯರಿಂಗ್, ಆಯ್ಕೆ ಮಾಡಿಕೊಂಡಿದ್ದು ಸಾರ್ವಜನಿಕ ಸೇವೆ. ಪರಿಸರ ಪ್ರೇಮವೂ ಒಂದು ರೀತಿಯಲ್ಲಿ ಸಾರ್ವಜನಿಕ ಸೇವೆಯೇ. ಜೂ.5 ವಿಶ್ವಪರಿಸರ ದಿನಾಚರಣೆ ಅಂತ ಒಂದು ದಿನ ನೆಪಮಾತ್ರಕ್ಕೆ ಆಚರಿಸಿ ಪತ್ರಿಕೆಗಳಲ್ಲಿ ಭಾವಚಿತ್ರಗಳು ಬಂದ ನಂತರ ನಮಗೂ ಅದಕ್ಕೂ ಸಂಬಂಧವಿಲ್ಲವೇ ಎಂದು ಮತ್ತೆ ಪರಿಸರ ದಿನಾಚರಣೆಯನ್ನು ಮುಂದಿನ ವರ್ಷ ಜೂನ್ 5ಕ್ಕೆ ನೆನಪು ಮಾಡಿಕೊಂಡು ಫೋಟೋಕ್ಕೆ ಪೋಸ್ ನೀಡುವವರೇ  ಹೆಚ್ಚಿನ ಮಂದಿ ಇರುವಾಗ ಇಂಥಹ ಪರಿಸರ ಪ್ರೇಮಿಗಳು ಬೆರಳೆಣಿಕೆಯಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಕಾಣ ಸಿಗುತ್ತಾರೆ. ಇಂಥಹ ಅಪರೂಪದ ವ್ಯಕ್ತಿಗಳು ಇರುವುದರಿಂದಲೇ ಅಲ್ಪಸ್ವಲ್ಪ ಮಳೆ ಬೆಳೆಗಳನ್ನು ಕಾಣುತ್ತಿದ್ದೇವೆ ಎಂದರೂ ತಪ್ಪಾಗಲಾರದು.

ಅದೇನೇ ಇರಲಿ ಪೊಲೀಸರಲ್ಲಿಯೂ ಮಾನವೀಯತೆ ಇದೆ. ಪರಿಸರ ಕುರಿತು ಕಾಳಜಿಯಿದೆ. ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಬೇಕೆಂಬ ತವಕವಿದೆ. ನೋಡುವ ಕಣ್ಣಿಗೆ ಹಸಿರಿನ ಹೊದಿಕೆ ಕಾಣಿಸಬೇಕೆನ್ನುವ ಹಂಬಲವಿದೆ. ಇನ್ಸಪೆಕ್ಟರ್ ಸುನಿಲ್ ಕೇವಲ ಒಂದು ದಿನ ಮಾತ್ರ ಪರಿಸರ ದಿನಾಚರಣೆಯನ್ನು ಮಾಡುತ್ತಿಲ್ಲ. ಇವರಿಗೆ ಪ್ರತಿದಿನವೂ ಪರಿಸರ ದಿನಾಚರಣೆಯೇ. ಈ ದಿನವೂ ಕೂಡಾ ಅವರು ತಮ್ಮ ಮನೆಯ ಪಕ್ಕದಲ್ಲೇ ಸಸಿಗಳನ್ನು ನೆಟ್ಟು ಅದಕ್ಕೆ ನೀರುಣಿಸಿದ್ದಾರೆ. ನಿಮ್ಮ ಪರಿಸರ ಪ್ರೇಮ, ಹಸಿರೀಕರಣ ನಿರಂತರವಾಗಿರಲಿ. ಯುವ ಜನತೆಗೆ ಆದರ್ಶವಾಗಿರಲಿ ಎಂಬುದೇ ನಮ್ಮ ಆಶಯ. (ವರದಿ:ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: