ಕರ್ನಾಟಕಪ್ರಮುಖ ಸುದ್ದಿ

56 ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳ ಕಣಕ್ಕಿಳಿಸುತ್ತೇವೆ : ಕಾಂಗ್ರೆಸ್ ನಾಯಕರ ವಿರುದ್ಧ ಮುನವಳ್ಳಿ ಆಕ್ರೋಶ

ರಾಜ್ಯ (ಪ್ರಮುಖ ಸುದ್ದಿ) ಬೆಳಗಾವಿ, ಜೂನ್ 5 : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆದಿಯಾಗಿ ಕಾಂಗ್ರೆಸ್ ನಾಯಕರು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದರೆ ಉತ್ತರ ಕರ್ನಾಟಕದಾದ್ಯಂತ 56 ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಎಚ್ಚರಿಸಿದ್ದಾರೆ.

ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷದ ನಾಯಕರು ಕಡೆಗಣಿಸುತ್ತಿದ್ದಾರೆ. ಎಲ್ಲ ಸಮುದಾಯಗಳಿಗೆ ಪ್ರಾತಿನಿಧ್ಯ ಒದಗಿಸಬೇಕಾದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕರ್ತವ್ಯ. ಅವರು ಕಿವಿ ಊದುವವರ ಮಾತು ಕೇಳದೆ ಪಕ್ಷದ ನಿಷ್ಠಾವಂತ ಕಾರಯಕರ್ತರ ಮಾತುಗಳನ್ನು ಕೇಳಬೇಕು ಎಂದು ಆಗ್ರಹಿಸಿದರು.

ನಾಯಕತ್ವ ಗುಣ ಬೆಳಸಿಕೊಳ್ಳಲು ಸಿದ್ದರಾಮಯ್ಯಗೆ ಆಗ್ರಹ !

ಪಕ್ಷದಲ್ಲಿ ಸೂಕ್ತ ಅಧಿಕಾರ-ಪ್ರಾತಿನಿಧ್ಯ ಕೇಳಿದರೆ ಗುರ್ರ್ ಎನ್ನುವುದನ್ನು ಮುಖ್ಯಮಂತ್ರಿಗಳು ಬಿಡಬೇಕು. ಪಕ್ಷಕ್ಕಾಗಿ ನನ್ನಿಂದ ಎರಡೂವರೆ ಲಕ್ಷ ರೂ ದೇಣಿಗೆ ಸಂಗ್ರಹಿಸಿದ್ದೀರಿ. ಈ ಹಣ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಬಳಕೆಯಾಗಿದೆ. ನನ್ನಂತೆ ಸಾವಿರಾರು ಕಾರ್ಯಕರ್ತರು ಪಕ್ಷಕ್ಕಾಗಿ ಹಣ ಪಾವತಿಸಿದ್ದಾರೆ, ದುಡಿದಿದ್ದಾರೆ. ಪಕ್ಷಕ್ಕೆ ನಾಯಕರು ಮಾತ್ರವಲ್ಲ ಕಾರ್ಯಕರ್ತರು ಕೂಡ ಜೀವಾಳ. ಹೀಗಾಗಿ ಮುಖ್ಯಮಂತ್ರಿಗಳು ಎಲ್ಲ ಸಮುದಾಯದ ಮುಖಂಡರ ಮಾತುಗಳನ್ನು ಆಲಿಸುವ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಂಕರ ಮುನವಳ್ಳಿ ಆಗ್ರಹಿಸಿದರು.

ಪಕ್ಷ ಜಾರಕಿಹೊಳಿಯದ್ದಲ್ಲ :

ಕಾಂಗ್ರೆಸ್ ಪಕ್ಷ ಜಾರಕಿಹೋಳಿ ಕುಟುಂಬದ ಸ್ವತ್ತಲ್ಲ ಎಂದು ಗುಡುಗಿದ ಅವರು, ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಂದ ಅಧಿಕಾರಕ್ಕೆ ಬರುತ್ತದೆ. ಪಕ್ಷದಲ್ಲಿ ಬಲಾಢ್ಯರಿಗೆ ಅಧಿಕಾರ ಹಂಚಿಕೆ ನಡೆಯುತ್ತಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಉತ್ತರ ಕರ್ನಾಟಕ ಮುಖಂಡರು, ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ವೀರಶೈವ ಲಿಂಗಾಯತ, ಪರಿಶಿಷ್ಟ, ಅಲ್ಪಸಂಖ್ಯಾತರಿಗೆ ಯಾಕೆ ಅವಕಾಶ ನೀಡುತ್ತಿಲ್ಲ ಎಂದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಾಂಗ್ರೆಸ್‍ ನಾಯಕರ ವಿರುದ್ಧ ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಅವರು ವಾಗ್ದಾಳಿ ನಡೆಸಿದ್ದಾರೆ.

ಡಿಕೆಶಿ ಪರ ಬ್ಯಾಟಿಂಗ್ :

ರಾಜ್ಯದ ಮುಖಂಡರಿಗೆ ರಾಹುಲ್‌ ಗಾಂಧಿಯನ್ನು ಪ್ರಧಾನಿ ಮಾಡುವ ಇಚ್ಛೆ ಇಲ್ಲವಾ? ಎಂದು ಪ್ರಶ್ನಿಸಿದ ಮುನವಳ್ಳಿಯವರು, ಕಾರ್ಯಕರ್ತರ ಹಣದಲ್ಲಿ ಕಾಂಗ್ರೆಸ್ ಕಚೇರಿ ಕಟ್ಟುತ್ತೀರಿ. ಪಕ್ಷ ಸಂಘಟಿಸುವ ಡಿ.ಕೆ. ಶಿವಕುಮಾರ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಏಕೆ ಆಯ್ಕೆ ಮಾಡಲಿಲ್ಲ ಎಂದೂ ಪ್ರಶ್ನಿಸಿದ್ದಾರೆ.

-ಎನ್.ಬಿ.ಎನ್.

Leave a Reply

comments

Related Articles

error: