ಮೈಸೂರು

ಸರ್ಕಾರ ಎಚ್ಚೆತ್ತುಕೊಂಡು ಹೆಜ್ಜೆಯಿಡುವ ಅವಶ್ಯಕತೆಯಿದೆ: ಕ್ಯಾಪ್ಟನ್ ರಾಜಾರಾವ್

ಕಾವೇರಿ ವಿಚಾರದಲ್ಲಿ 1924ರ ಒಪ್ಪಂದ  ರಾಜ್ಯಕ್ಕೆ ಕರಾಳ ಒಪ್ಪಂದವಾಗಿದ್ದು, ಕಾವೇರಿ ವಿಷಯವನ್ನು ನಿರ್ಲಕ್ಷಿಸಿ ರಾಜ್ಯ ಸಂಕಷ್ಟಕ್ಕೆ ಸಿಲುಕಿಕೊಳ್ಳಲು ಕಾರಣವಾಗಿದ್ದು, ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಹೆಜ್ಜೆಯಿಡುವ ಅವಶ್ಯಕತೆಯಿದೆ ಎಂದು ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ತಿಳಿಸಿದರು.

ಕಬಿನಿ ಹಿತ ರಕ್ಷಣಾ ಸಮಿತಿ, ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘ ಸಂಯುಕ್ತಾಶ್ರಯದಲ್ಲಿ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ  ಕಬಿನಿ-ಕಾವೇರಿ ಅಚ್ಚುಕಟ್ಟು ರೈತರ ಬೃಹತ್ ಸಮಾವೇಶದಲ್ಲಿ  ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ನ್ಯಾಯಾಲಯದಲ್ಲಿ ಹಿನ್ನಡೆಯಾಗಲು ಅಂದು 1892 ಹಾಗೂ 1924ರ ಕರಾಳ ಒಪ್ಪಂದಗಳೇ ಕಾರಣವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

1924ರಿಂದ 1975ರವರೆಗಿನ ಮೂವತ್ತು ವರ್ಷಗಳ ಒಪ್ಪಂದದಂತೆ ರಾಜ್ಯ ತಮಿಳುನಾಡಿಗೆ ನೀರು ಬಿಟ್ಟಿರುವುದು ದುರದೃಷ್ಟಕರವಾಗಿದೆ. ಅವುಗಳನ್ನೇ ಇಂದಿಗೂ ಆಧಾರವಾಗಿಟ್ಟುಕೊಂಡಿರುವ ತಮಿಳುನಾಡು ಪದೇ ಪದೇ ನ್ಯಾಯಾಲಯದ ಮೊರೆ ಹೋಗುತ್ತಿದ್ದು ರಾಜ್ಯಕ್ಕೆ ಹಿನ್ನಡೆಯಾಗುತ್ತಿದೆ. ಅಲ್ಲದೆ ಈ ಒಪ್ಪಂದಗಳ ಬಗ್ಗೆ ಅಂದು ವಿಶ್ವೇಶ್ವರಯ್ಯನವರೇ ಬೇಸರ ವ್ಯಕ್ತಪಡಿಸಿದ್ದರು. ಆದರೆ, ಅಂದು ಮೈಸೂರು ರಾಜ್ಯವಾಗಿದ್ದ ಸಂದರ್ಭದಲ್ಲಿ ಕಾವೇರಿ, ಕಬಿನಿ ಮೊದಲಾದ ಅಣೆಕಟ್ಟು ನಿರ್ಮಿಸಲು ಮದ್ರಾಸ್ ಪ್ರೆಸಿಡೆಂಟ್ ಅನುಮತಿ ಪಡೆಯಬೇಕಾದ ಸಂದರ್ಭದಲ್ಲಿ ಇಂತಹ ಕರಾಳ ಒಪ್ಪಂದಗಳು ಆಗಿವೆ ಎಂದು ವಿವರಿಸಿದರು.

ಕನ್ನಂಬಾಡಿ ನಿರ್ಮಿಸುವ ವೇಳೆಯಲ್ಲಿ 50 ವರ್ಷದವರೆಗೆ ಮಾತ್ರವೆಂದು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈಗ ಅದನ್ನೇ ಮುಂದುವರೆಸುವ ಬದಲಿಗೆ ಮರು ಪರಿಶೀಲನೆ ಮಾಡಿ ನೀರು ಹಂಚಿಕೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾವೇರಿ ವಿಚಾರದ ಸೂಕ್ಷ್ಮತೆ ಅರಿಯುವಲ್ಲಿ ವಿಫಲವಾಗಿದೆ. ಕಾವೇರಿ ಕಮಿಟಿ ಮುಖ್ಯಸ್ಥ ಶಂಕರ್‌ರಾವ್ ಮರಣದ ಬಳಿಕ ಕಮಿಟಿಯನ್ನು ಮತ್ತೆ ರಚಿಸುವ ಕಾರ್ಯ ನಡೆದಿಲ್ಲ. ಅಲ್ಲದೆ ಕ್ಯಾಬಿನೆಟ್‌ನಲ್ಲಿ ಇದ್ದ ನದಿ ರಕ್ಷಣಾ  ಕ್ಯಾಬಿನೆಟ್ ಸಹ ಇಲ್ಲವಾಗಿದೆ. ಇರುವ ಬಹುತೇಕ ನಿಗಮ ಮಂಡಳಿಗಳು ದಾರಿ ತಪ್ಪಿದ್ದು, ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ನದಿ ನಿರ್ವಾಹಣಾ ಕಮಿಟಿ ರಚಿಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರೈತ ಮುಖಂಡ, ಶಾಸಕ ಪುಟ್ಟಣ್ಣಯ್ಯ ಮಾತನಾಡಿ, ನಾಚಿಗೆಗೆಟ್ಟ ಸರ್ಕಾರಗಳಿಗೆ ಕೃಷಿಕನ ಕಷ್ಟ ಅರ್ಥವಾಗುತ್ತಿಲ್ಲ. ಅದಕ್ಕಾಗಿಯೇ ಇದುವರೆವಿಗೂ ರೈತರಿಗೆ ನೆರವಾಗುವ ಕೃಷಿ ಆಯೋಗ, ತರಕಾರಿ ಮಂಡಳಿ ರಚಿಸಿಲ್ಲ. ಅಲ್ಲದೆ ಕಾವೇರಿ ವಿಚಾರದಲ್ಲಿ ವಾದ ಮಂಡಿಸುತ್ತಿರುವ ನಾರಿಮನ್‌ರಿಂದ ನ್ಯಾಯ ನಿರೀಕ್ಷೆ ಅಸಾಧ್ಯವಾಗಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದೇ ಉತ್ತಮವೆಂದು ಹೇಳುತ್ತಾರೆ. ಭತ್ತದ ಬೆಳೆ ಕೇವಲ ನಮಗೆ ಆದಾಯದ ಬೆಳೆಯಲ್ಲ ಇಡೀ ದೇಶಕ್ಕೆ ಅನ್ನ ಹಾಗೂ ಆಹಾರ ನೀಡುವ ರೈತರ ಕಷ್ಟಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ್‌ಕುಮಾರ್, ಕೋಡಿಹಳ್ಳಿ ಚಂದ್ರಶೇಖರ್, ಪ್ರಕಾಶ್ ಹೊನ್ನುರು, ಅತ್ತಹಳ್ಳಿ ದೇವರಾಜ್ ಸೇರಿದಂತೆ ಮೈಸೂರು ಮಂಡ್ಯ, ಚಾಮರಾಜನಗರ ಜಿಲ್ಲೆಗಳ ನೂರಾರು ಮಂದಿ ರೈತರು ಸಮಾವೇಶದಲ್ಲಿ ಭಾಗವಹಿಸಿದ್ದರು.

 

 

 

Leave a Reply

comments

Related Articles

error: