ಮೈಸೂರು

ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಮೂಲಕ ಚುನಾವಣೆಗೆ ಸಜ್ಜಾಗಿ: ಸಯೀದ್

ಮೈಸೂರು, ಜೂ.೫: ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಸಜ್ಜಾಗಿ ಎಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎ.ಸಯೀದ್ ತಿಳಿಸಿದರು.
ಸೋಮವಾರ ರಾಜೀವ್‌ನಗರದ ಶಬ್ನಂ ಫಂಕ್ಷನ್ ಹಾಲ್‌ನಲ್ಲಿ ಆಯೋಜಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‌ಡಿಪಿಐ ಪಕ್ಷದ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಚುನಾವಣೆ ನಮ್ಮ ಪಕ್ಷಕ್ಕೆ ಮೊದಲನೆ ಚುನಾವಣೆಯಾಗಿತ್ತು. ಹೀಗಿದ್ದರು ಸಹ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಜನತೆ ಪಕ್ಷದ ಮೇಲೆ ಭರವಸೆಯನ್ನಿಟ್ಟು ನೀಡಿದ ಮತಗಳಿಂದಾಗಿಯೇ ನಾವು ದ್ವೀತಿಯ ಸ್ಥಾನ ಪಡೆಯಲು ಸಾಧ್ಯವಾಯಿತು. ಜನ ಪರ್ಯಾಯ ವ್ಯವಸ್ಥೆಗಾಗಿ ಅಬ್ದುಲ್ ಮಜೀದ್‌ರವರಿಗೆ ಸಹಮತ ವ್ಯಕ್ತಪಡಿಸಿದರು. ಕಳೆದ ಚುನಾವಣೆಯ ಫಲಿತಾಂಶ ನಮಗೆ ಮತ್ತು ನಮ್ಮ ಮುಂದಿನ ರಾಜಕೀಯ ಹೋರಾಟಕ್ಕೆ ಸಕಾರಾತ್ಮಕ ಫಲಿತಾಂಶವಾಗಿತ್ತು. ಆದುದರಿಂದ ಪ್ರಸ್ತುತ ಕೆಟ್ಟ ರಾಜಕೀಯ ಸನ್ನಿವೇಶದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಮೂಲಕ ಎಸ್‌ಡಿಪಿಐ ಪರ್ಯಾಯ ಎಂಬುವುದನ್ನು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮುಂಬುರುವ ವಿಧಾನಸಭಾ ಚುನಾವಣೆಗೆ ನಾವು ಸಿದ್ಧರಾಗಬೇಕು ಎಂದು ಪಕ್ಷದಕಾರ್ಯಕರ್ತರಿಗೆ ಕರೆ ನೀಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್.ಕೆ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ನವ ಕರ್ನಾಟಕದ ನಿರ್ಮಾಪಕರು. ಸಾಮಾಜಿಕ ನ್ಯಾಯದ ಪರಿಕಲ್ಪನೆ ಪ್ರಾರಂಭವಾಗಿದ್ದು ಅವರ ಕಾಲಘಟ್ಟದಲ್ಲಾಗಿತ್ತು. ಅವರು ಸಮಾಜ ಪರಿವರ್ತನೆಯ ಹರಿಕಾರವಾಗಿದ್ದರು. ೧೯೨೧ರಲ್ಲಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳಿಗೆ ಶೇ.೭೫ರಷ್ಟು ಮೀಸಲಾತಿ ಘೋಷಣೆ ಮಾಡಿದ ಅವರು, ಪ್ರಥಮವಾಗಿ ಸಾಮಾಜಿಕ ಮತು ಆರ್ಥಿಕವಾಗಿ ಮಿಲ್ಲರ್ ಆಯೋಗವನ್ನು ಶಿಫಾರಸ್ಸು ಮಾಡಿದರು ರವರ ಆದರ್ಶಗಳು ಇಂದಿನ ರಾಜಕಾರಿಣಿಗಳಿಗೆ ಮಾದರಿ ಎಂದರು.
ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ, ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್, ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹಾಗೂ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೆ.ಬಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: