ಕರ್ನಾಟಕದೇಶಮೈಸೂರು

ಕಾವೇರಿ ಜಲವಿವಾದ: ವಾಸ್ತವಾಂಶ ಅಧ್ಯಯನಕ್ಕೆ ತಜ್ಞರ ತಂಡ ರಚಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಎರಡೂ ರಾಜ್ಯಗಳಲ್ಲಿನ ವಾಸ್ತವ ಸ್ಥಿತಿ ಅರಿಯಲು ಕೇಂದ್ರ ಸರ್ಕಾರವು ಬುಧವಾರ ಉನ್ನತ ತಜ್ಞರ ತಂಡ ರಚಿಸಿದೆ.

ಕೇಂದ್ರ ಜಲ ಆಯೋಗದ ಅಧ್ಯಕ್ಷರಾಗಿರುವ ಜಿ.ಎಸ್. ಝಾ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿರುವ ತಜ್ಞರ ತಂಡವು ಕೇಂದ್ರ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಮಂತ್ರಾಲಯದ ಅಧೀನದಲ್ಲಿ ರಚನೆಯಾಗಿದೆ.

ಕಳೆದ ಅ.4 ರಂದು ಸುಪ್ರಿಂ ಕೋರ್ಟ್‍ ನೀಡಿದ ನಿರ್ದೇಶನದಂತೆ ರಚನೆಯಾಗಿರುವ ಮೇಲುಸ್ತುವಾರಿ ಸಮಿತಿಯು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಕಾವೇರಿ ಜಲಾನಯನ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತಾವಾಂಶಗಳನ್ನು ಕಲೆಹಾಕಿ ಅ.17 ರ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ.

ತಜ್ಞ ಸಮಿತಿ ಸದಸ್ಯರು ಕಾವೇರಿ ಜಲಾನಯನ ಪ್ರದೇಶಗಳ ಭೇಟಿಗಾಗಿ ಅ.7 ರಂದು ಬೆಂಗಳೂರಿನಲ್ಲಿ ಸಭೆ ಸೇರಲಿದ್ದು, ಅ.17 ರಂದು ಸುಪ್ರಿಂಕೋರ್ಟ್‍ಗೆ ಮಾಹಿತಿ ಒದಗಿಸಲಿದೆ.

ಕೇಂದ್ರ ಜಲ ಆಯೋಗದ ಸದಸ್ಯ ಎಸ್‍. ಮಸೂದ್‍ ಹುಸೇನ್, ಕೃಷ್ಣ ಗೋದಾವರಿ ಜಲಾನಯನ ಪ್ರದೇಶದ ಮುಖ್ಯ ಇಂಜಿನಿಯರ್‍ ಆರ್‍.ಕೆ. ಗುಪ್ತಾ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮುಖ್ಯಕಾರ್ಯದರ್ಶಿಗಳು ಅಥವಾ ಎರಡೂ ರಾಜ್ಯಗಳ ಪ್ರತಿನಿಧಿಗಳು, ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ 4 ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಪುದುಚೆರಿಯ ಮುಖ್ಯ ಇಂಜಿನಿಯರ್‍ ಗಳನ್ನು ತಜ್ಞ ಸಮಿತಿಯ ತಂಡ ಒಳಗೊಂಡಿರುತ್ತದೆ.

ತಜ್ಞ ಸಮಿತಿಯು ಕರ್ನಾಟಕದ ಹೇಮಾವತಿ, ಹಾರಂಗಿ, ಕೃಷ್ಣರಾಜ ಸಾಗರ, ಕಬಿನಿ ಜಲಾಶಯಗಳಿಗೆ ಮತ್ತು ತಮಿಳುನಾಡಿನ ಮೆಟ್ಟೂರು, ಭವಾನಿ, ಅಮರಾವತಿ ಜಲಾಶಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಕಾವೇರಿ ಪ್ರಕರಣದ ಮುಂದಿನ ವಿಚಾರನೆಯು ಅ.18 ಕ್ಕೆ ನಿಗದಿಯಾಗಿದ್ದು, ಅಷ್ಟರಲ್ಲಿ ಸಮಿತಿಯು ಕೋರ್ಟ್‍ಗೆ ವರದಿ ಸಲ್ಲಿಸಬೇಕಿದೆ.

ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಜಲತಜ್ಞರ ಸಮಿತಿ ರಚಿಸುವಂತೆ ನ್ಯಾ. ದೀಪಕ್‍ ಮಿಶ್ರಾ ಮತ್ತು ನ್ಯಾ. ಉದಯ್ ಉಮೇಶ್ ಲಲಿತ್‍ ಅವರನ್ನೊಳಗೊಂಡ ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠ ಕಳೆದ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

Leave a Reply

comments

Related Articles

error: