ಕರ್ನಾಟಕ

ಅರ್ಥಪೂರ್ಣವಾಗಿ ಜರುಗಿದ ಸಾಹಿತ್ಯ ಸಮ್ಮೇಳನ

ರಾಜ್ಯ(ಮಡಿಕೇರಿ) ಜೂ.5:-  ಪಟ್ಟಣದಲ್ಲಿ ಸೋಮವಾರ ನಡೆದ 5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಜರುಗಿತು.

ಬೆಳಿಗ್ಗೆ 8 ಗಂಟೆಗೆ ಸಮ್ಮೇಳನ ನಡೆಯುವ ಒಕ್ಕಲಿಗರ ಸಮುದಾಯ ಭವನದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ತಹಸೀಲ್ದಾರ್ ಜಿ.ಎಸ್.ಶಿವಣ್ಣ ನೆರವೇರಿಸಿದರು. ನಾಡ ಧ್ವಜವನ್ನು ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಪರಿಷತ್ ಧ್ವಜಾರೋಹಣವನ್ನು ಕಸಾಪ ತಾಲೂಕು ಅಧ್ಯಕ್ಷ ಎಚ್.ಜೆ. ಜವರಪ್ಪ ನೆರವೇರಿಸಿದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಲ್ಲೇಸ್ವಾಮಿಯವರು ಕಂಜರ ಬಾರಿಸಿ, ಕನ್ನಡ ಧ್ವಜವನ್ನು ಅಧ್ಯಕ್ಷರಿಗೆ ನೀಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ವೃತ್ತ ನಿರೀಕ್ಷಕ ಪರಶಿವಮೂರ್ತಿ, ತಾಲೂಕು ಪಂಚಾಯಿತಿ ಗ್ರಾಮಾಭಿವೃದ್ಧಿಯ ಸಹಾಯಕ ನಿರ್ದೇಶಕ ಡಿ.ಬಿ. ಸುನಿಲ್, ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆಯ ಯಶೋದ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್, ಹಿಂದುಳಿದ ವರ್ಗಗಳ ತಾಲೂಕು ವಿಸ್ತರಣಾಧಿಕಾರಿ ಸ್ವಾಮಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವೈ ಪ್ರಕಾಶ್  ಶುಭಹಾರೈಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿಯಿಂದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಚಂದ್ರಶೇಖರ ಮಲ್ಲೋರಹಟ್ಟಿಯವರನ್ನು ತೆರೆದ ಜೀಪಿನಲ್ಲಿ ಭವ್ಯ ಮೆರವಣಿಗೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರೆ ತರಲಾಯಿತು. ಮೆರವಣಿಗೆಯಲ್ಲಿ ಕಳಸಹೊತ್ತ ಮಹಿಳೆಯರು, ಮಂಗಳವಾದ್ಯ, ಸ್ತಬ್ಧಚಿತ್ರಗಳು, ಕೆದಮುಳ್ಳೂರು ಗ್ರಾಮದ ಶ್ರೀದೇವಿ ಮಂಡಳಿಯವರ ತೆಯ್ಯಂ ಕುಣಿತ, ಗೊಂಬೆ ಕುಣಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಡೊಳ್ಳುಕುಣಿತ, ವೀರಗಾಸೆ, ಕೊಡಗಿನ ವಾಲಗ, ಸುಗ್ಗಿ,ಉರುಟಿಕೊಟ್ಟ್‍ಆಟ್, ವೀರಭದ್ರ ಕುಣಿತ, ಶಾಲಾ ಕಾಲೇಜುಗಳ ಸ್ತಬ್ಧ ಚಿತ್ರಗಳು, ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಕನ್ನಡಾಭಿಮಾನಿಗಳು ಪಾಲ್ಗೊಂಡು ಮೆರವಣಿಗೆಗೆ ಮೆರುಗು ತಂದಿದ್ದರು. ದಾರಿಯುದ್ದಕ್ಕೂ ಜನರು ಮನೆಯ ಮುಂಭಾಗ ಬಂದು ಕನ್ನಡಾಂಭೆಯ ತೇರನ್ನು ಕಣ್ತುಂಬಿಕೊಂಡರು. ಮೆರವಣಿಗೆಯಲ್ಲಿ ಸಾಗಿ ಬಂದ ಕನ್ನಡಾಂಬೆಯ ತೇರಿಗೆ ಹಾಗೂ ಅಧ್ಯಕ್ಷರಿಗೆ ಪುಷ್ಪವನ್ನು ಎರಚುವ ಮೂಲಕ ವಿವಿಧ ಸಂಘ ಸಂಸ್ಥೆಗೆಳ ಪದಾಧಿಕಾರಿಗಳು ಬರ ಮಾಡಿಕೊಳ್ಳುತ್ತಿದ್ದದ್ದು ವಿಶೇಷವಾಗಿತ್ತು. (ವರದಿ:ಕೆಸಿಐ,ಎಸ್.ಎಚ್)

Leave a Reply

comments

Related Articles

error: