Uncategorizedಪ್ರಮುಖ ಸುದ್ದಿಮೈಸೂರು

ಇಲ್ಲಿ ಊರುಗೋಲೆ ಆಯುಧ: ವ್ಹೀಲ್ ಚೇರ್ ರಥ: ಪ್ರೇಕ್ಷಕರ ಕಣ್ಣಂಚಲ್ಲಿ ಮೆಲ್ಲಗೆ ಜಾರಿತ್ತು ಕಂಬನಿ

ಅಲ್ಲಿ ಊರುಗೋಲೆ ಆಯುಧವಾಗಿತ್ತು. ವ್ಹೀಲ್ ಚೇರ್ ರಥವಾಗಿತ್ತು. ಒಟ್ಟಿನಲ್ಲಿ ಅಲ್ಲೊಂದು ಯುದ್ಧದ ಸನ್ನಿವೇಶ ಸೃಷ್ಟಿಯಾಗಿತ್ತು. ಕೃಷ್ಣನ ವೇಷಧಾರಿ ವ್ಹೀಲ್ ಚೇರ್  ನ್ನೇ ರಥದ ತರ ರಭಸವಾಗಿ ಮುನ್ನಡೆಸುತ್ತಿದ್ದರೆ ಅಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ಒಮ್ಮೆಲೇ ಹೃದಯ ಸ್ತಂಭನವಾದ ಅನುಭವ.

ಇಂಥಹ ಒಂದು  ಅದ್ಭುತ ಸನ್ನಿವೇಶ ಸೃಷ್ಟಿಯಾಗಿದ್ದು ಬುಧವಾರ ಸಂಜೆ ಅರಮನೆ ಆವರಣದಲ್ಲಿ. ಕಲೆಗೆ ಯಾವುದೇ ನಿರ್ಬಂಧವಿಲ್ಲ. ಅದು ಜಾತಿ, ಧರ್ಮ, ವ್ಯಕ್ತಿ, ಈತ ಅಂಗ ಸರಿ ಇರೋ ಮನುಷ್ಯ. ಈತ ವಿಕಲಚೇತನ. ಊಹೂಂ ಇದಾವುದನ್ನೂ ನೋಡಿ ಒಲಿಯಲ್ಲ. ಕೆಲವೊಮ್ಮೊ ಕೈಕಾಲು ಸರಿ ಇರೋರೇ ಏನೂ ಸಾಧನೆ ಮಾಡಕಾಗಲ್ಲ. ಅಂತಹ ಸಮಯದಲ್ಲಿ ವಿಕಲಚೇತನರು ಏನು ತಾನೇ ಮಾಡಬಲ್ಲರು ಅಂತ ಅಂದುಕೊಂಡರೆ ಅದಕ್ಕಿಂತ ಮೂರ್ಖತನ ಬೇರೆ ಇರಲಿಕ್ಕಿಲ್ಲ. ನಿಜಕ್ಕೂ ಭಗವಂತ ವಿಕಲಚೇತನರಲ್ಲಿ ಏನೋ ಒಂದು ಅದ್ಭುತ ಶಕ್ತಿಯನ್ನಿಟ್ಟೇ ಭೂಮಿಗೆ ಕಳುಹಿಸಿರುತ್ತಾನೆ. ಅದಕ್ಕೆ ಸ್ಪಷ್ಟ ಉದಾಹರಣೆ ಮ್ಯಾಜಿಕ್ ಆನ್ ವ್ಹೀಲ್ಸ್ ತಂಡ ನಡೆಸಿಕೊಟ್ಟ ಅದ್ಭುತ ಕಲಾ ಪ್ರದರ್ಶನ. ಸೂಫಿ ನೃತ್ಯ ಹಾಗೂ ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹೀ ನೃತ್ಯಗಳು ಪ್ರೇಕ್ಷಕರಲ್ಲಿ ವ್ಹಾವ್ ಉದ್ಘಾರ ಹೊರಡಿಸಿದರೆ ಕರ್ಮಣ್ಯೇ ವಾಧೀಕಾರಸ್ತೆ ಮಾಫಲೇಷು ಕದಾಚನಾ ಕೃಷ್ಣನು ಅರ್ಜುನನಿಗೆ ಬೋಧಿಸಿದ ಭಗವದ್ಗಿತೆಯ 18 ಅಧ್ಯಾಯಗಳು, ಕೂರ್ಮಾವತಾರ, ಮತ್ಸ್ಯಾವತಾರ, ವರಾಹ, ಕಲ್ಕಿ ಸೇರಿದಂತೆ ಶ್ರೀಕೃಷ್ಣನ ದಶಾವತಾರಗಳು, ಕರ್ಮಯೋಗ, ಧರ್ಮಯೋಗ, ಆಧ್ಯಾತ್ಮಯೋಗಗಳನ್ನು ಅಚ್ಚುಕಟ್ಟಾಗಿ ಮೈನವಿರೇಳುವಂತೆ ಪ್ರದರ್ಶಿಸಿದರು. ಅರ್ಜುನ ತನ್ನ ಊರುಗೋಲನ್ನೇ ಆಯುಧವನ್ನಾಗಿ ಮಾಡಿ ಕೌರವರೊಂದಿಗೆ  ಹೋರಾಡಿದ ರೀತಿಯಂತೂ ಕೆಲವು ಪ್ರೇಕ್ಷಕರ ಕಣ್ಣಂಚಲ್ಲಿ ಅವರಿಗರಿವಿಲ್ಲದೆ ಕಂಬನಿಯನ್ನು ಜಾರಿಸಿದರೆ ಇನ್ಕೆಲವರು ಮೂಕ ವಿಸ್ಮಿತರಾದರು.

ಇವನ್ನೆಲ್ಲಾ ಇಷ್ಟು ಯಶಸ್ವಿಯಾಗಿ ನಡೆಸಬೇಕಾದರೆ ಅವರಿಗೂ ಒಬ್ಬ ಸಾರಥಿ ಇರಲೇಬೇಕಲ್ಲಾ ಎನ್ನುವ ಪ್ರಶ್ನೆ ಹಲವರಲ್ಲಿ ಹುಟ್ಟುವುದು ಸಹಜ. ಹಾಂ. ಸಾರಥಿ ಇದ್ದಾರೆ ಅವರು ಬೇರಾರು ಅಲ್ಲ, ಇದೀಗ ನವದೆಹಲಿಯಲ್ಲಿರುವ ಕರ್ನಾಟಕದ ಆನೇಕಲ್ ಮೂಲದ ಸೈಯ್ಯದ್ ಸಲಾಲುದ್ದೀನ್ ಪಾಷಾ. ಭರತನಾಟ್ಯ, ಕಥಕ್ ಡ್ಯಾನ್ಸರ್. ಅಷ್ಟೇ ಅಲ್ಲ ನೃತ್ಯ ಸಂಯೋಜಕರು ಕೂಡ. ನ್ಯಾಷನಲ್ ಅವಾರ್ಡ್ ಮತ್ತು ಗಿನ್ನೆಸ್ ಅವಾರ್ಡ್ ಲಿಮ್ಕಾ ಬುಕ್ ದಾಖಲೆ ಸೇರಿದ ಹೆಗ್ಗಳಿಕೆ ಇವರದ್ದು. ಅವರ ತಾಯಿ ಚಿಕ್ಕಂದಿನಲ್ಲಿ ಅವರಿಗೆ ಕುರಾನ್ ಓದಲು ಕೊಡುತ್ತಿದ್ದರಂತೆ ಆದರೆ ಇವರು ಕುರಾನ್ ಜೊತೆ ಪುರಾಣಗಳನ್ನು ಓದುತ್ತಿದ್ದರಂತೆ. ಕನ್ನಡ ತಾಯಿಯ ಜನ್ಮಭೂಮಿಯಲ್ಲಿ ಜನ್ಮತಳೆದ ತಕ್ಷಣ ಇಲ್ಲಿನ ಭಾಷೆ, ಸಂಸ್ಕೃತಿ ನಮ್ಮ ರಕ್ತದಲ್ಲಿ ಬೆಳೆದು ಬಂದಿರುತ್ತೆ ಎಂದಾಗ ಪ್ರೇಕ್ಷಕರಿಂದ ಹೊರಟ ಕರತಾಡನವೇ ಅವರ ಕಲಾಪ್ರೇಮವನ್ನು ತಿಳಿಸಿತ್ತು. ಅವರ ಸ್ಫುಟವಾದ ವಾಕ್ ಚಾತುರ್ಯ ನಿಜಕ್ಕೂ ವರ್ಣನೆಗೆ ನಿಲುಕದ್ದು. ಕೇರಳದ ಉನ್ನಿಕೃಷ್ಣನ್ ಮತ್ತು ತಂಡ ಕರ್ನಾಟಕ ಸಂಗೀತವನ್ನು ನಡೆಸಿಕೊಟ್ಟರು.

Leave a Reply

comments

Related Articles

error: