ಮೈಸೂರು

ನವರಾತ್ರಿ ರಂಗೋತ್ಸವದಲ್ಲಿ ವಿ.ಎನ್. ಅಕ್ಕಿ ಅವರಿಗೆ ಸನ್ಮಾನ

ರಾಯಚೂರಿನ ರಂಗಭೂಮಿ ಕಲಾವಿದರಾದ ವಿ.ಎನ್. ಅಕ್ಕಿ ಅವರನ್ನು ಕಲಾಮಂದಿರದಲ್ಲಿರುವ ರಂಗಾಯಣದ ಭೂಮಿಗೀತದಲ್ಲಿ ನಡೆದ ನವರಾತ್ರಿ ರಂಗೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿ.ಎನ್. ಅಕ್ಕಿ, ರಂಗಭೂಮಿಗೆ ಅಳಿವಿಲ್ಲ ಆದರೆ, ಅದರಲ್ಲಿ ಸಾಕಷ್ಟು ಸಾಮಾಜಿಕ ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ಅರಿತು ತನ್ನದೇ ರೀತಿಯಲ್ಲಿ ಪರಿಹರಿಸುವ ಕಲೆ ಮಾತ್ರ ರಂಗಭೂಮಿಗೆ ತಿಳಿದಿಲ್ಲ. ರಂಗಭೂಮಿಯನ್ನು ಆರಾಧಿಸುವವರ ಸಂಖ್ಯೆ ದಿನ ಕಳೆದಂತೆ ಕಡಿಮೆಯಾಗುತ್ತಿರುವುದು ವಿಷಾದಕರ ಎಂದರು.

ಸರಕಾರ ಸಾವಿರಾರು ಆಶ್ವಾಸನೆಗಳನ್ನು ಮಾಡುತ್ತದೆ. ಆದರೆ, ಇವುಗಳಲ್ಲಿ ಕಾರ್ಯಗತವಾಗುವುದು ಬೆರಳೆಣಿಕೆಯಷ್ಟು ಮಾತ್ರ. ರಾಜಕಾರಣಿಗಳು ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಜನರು ರಾಜಕಾರಣಿಗಳ ಬಗ್ಗೆ ಎಚ್ಚರಿಕೆಯಿಂದಿರುವ ಅವಶ್ಯಕತೆಯಿದೆ. ಸರಕಾರವು ರಂಗಭೂಮಿ ಮತ್ತು ರಂಗಭೂಮಿ ಕಲಾವಿದರಿಗೆ ಸೌಕರ್ಯಗಳನ್ನು ಪೂರೈಸಬೇಕು ಎಂದು ಹೇಳಿದರು.

ರಂಗಭೂಮಿಗೆ ನಾನು ನೀಡಿರುವ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಿರುವುದು ಬಹಳ ಖುಷಿಕೊಟ್ಟಿದೆ. ಈ ಕಾರ್ಯಕ್ರಮದ ಭಾಗಿಯಾಗಿರುವುದು ಸಂತಸದ ಸಂಗತಿ ಎಂದರು.

ಹಿರಿಯ ರಂಗಭೂಮಿ ಕಲಾವಿದ ಮುದ್ದು ಕೃಷ್ಣ, ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಸಂಯೋಜಕ ವಿನಾಯಕ ಭಟ್ ಹಸನಗಿ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: