ಮೈಸೂರು

ಕೈಮುಗಿದು ಒಳಗೆ ಬಾ ಇದು ಪುಷ್ಪಕಾಶಿ!

palapushpa-webನಾವೇನಾದ್ರೂ ಮೈಸೂರಿಗೆ ಹೊರಟವರು ಮರೆತು ದೆಹಲಿ ಕಡೆಯೇನಾದ್ರೂ ಬಂದುಬಿಟ್ಟಿದ್ದೇವಾ? ಹೀಗೊಂದು ಪ್ರಶ್ನೆ ಅಲ್ಲಿ ಭೇಟಿ ನೀಡಿದವರ ಮನಸ್ಸಿನಲ್ಲಿ ಮೂಡಿದರೆ ಆಶ್ಚರ್ಯವೇನಿಲ್ಲ.

ಇದಕ್ಕೆ ಕಾರಣವೂ ಇದೆ. ಯಾಕಂದರೆ ಮೈಸೂರಿನ ನಜರಾಬಾದ್ ನಲ್ಲಿರುವ ಕುಪ್ಪಣ್ಣ  ಪಾರ್ಕ್ನಲ್ಲಿ ದಸರಾ ಉತ್ಸವ ಪ್ರಯುಕ್ತ ಗೇಟ್ ವೇ ಆಫ್ ಇಂಡಿಯಾ ಲಕ್ಷಾಂತರ ಗುಲಾಬಿ ಹೂಗಳಿಂದ ರೂಪುಗೊಂಡು ನಿಂತಿದ್ದು ಕೈಮುಗಿದು ಒಳಗೆ ಬಾ ಇದು ಪುಷ್ಪಕಾಶಿ ಎನ್ನುವಂತಿದ್ದರೆ ಹಲವು ವಿಧದ ಹೂಗಳು ಮುಖವರಳಿಸಿ ಇದು ನಮ್ಮದೇ ಲೋಕ ಎಂಬಂತಿತ್ತು.

ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಫಲಪುಷ್ಪ ಪ್ರದರ್ಶನದಕ್ಕೆಪ್ರತಿದಿನವೂ ಸಹಸ್ರಾರು ಜನರು ಭೇಟಿ ನೀಡಿ ಅಲ್ಲಿನ ಸೌಂದರ್ಯವನ್ನು ತಮ್ಮ ಕಣ್ಮನಗಳಲ್ಲಿ ತುಂಬಿಕೊಳ್ಳುತ್ತಿದ್ದಾರೆ. ವಿವಿಧ ರೀತಿಯ ಹೂಗಳ ಜೊತೆ ಅಲಂಕಾರಿಕ ಗಿಡಗಳು ಗಮನ ಸೆಳೆಯುತ್ತಿವೆ.

ಕಸದಿಂದ ರಸ ಎನ್ನುವುದನ್ನು ಅಲ್ಲಿ ಚಾಚು ತಪ್ಪದೇ ಪಾಲಿಸಲಾಗಿದ್ದು ಅನುಪಯುಕ್ತ ವಸ್ತುಗಳನ್ನು ಯಾವ ರೀತಿ ಉಪಯೋಗಿಸಿಕೊಳ್ಳಬಹುದು ಎಂಬುದನ್ನು ಚೆನ್ನಾಗಿಯೇ ತೋರಿಸಿಕೊಟ್ಟಿದ್ದು, ಎಲ್ಲರ ಗಮನವೂ ಅದರತ್ತಲೇ ವಾಲುತ್ತಿರುವುದು ವಿಶೇಷ.

ಸ್ಟೋನ್ ಆರ್ಟ್, ವಾಲ್ ಗಾರ್ಡನಿಂಗ್ ಆಕರ್ಷಕವಾಗಿ ಕಂಡರೆ  ಟೈರ್ ಹಾಗೂ ಕಸದ ಗಾಡಿಗಳಲ್ಲಿ ಹೂವಿನ ಗಿಡಗಳನ್ನು ಬೆಳೆಸಿರುವುದು ಓ ಗಿಡಗಳನ್ನು ಹೀಗೂ ಬೆಳೆಸಬಹುದಾ ಎಂದು ಪರಿಸರ ಪ್ರೇಮಿಗಳ ಹುಬ್ಬೇರುವಂತೆ ಮಾಡಿದೆ. ಪಾಲಕರೊಂದಿಗೆ ಬಂದ ಪುಟಾಣಿಗಳು ಮಿಕ್ಕಿಮೌಸ್, ಛೋಟಾಭೀಮ್, ರಾಜು, ಚುಟ್ಕಿಗಳನ್ನು ತಮ್ಮೆದುರಲ್ಲೇ ನೋಡಿ ದಂಗಾಗಿದ್ದಾರೆ.

ಕಲಾವಿದನ ಕೈಚಳಕದಿಂದ ವಿವಿಧ ತರಕಾರಿಗಳಲ್ಲಿಯೂ ಪ್ರಾಣಿ, ಪಕ್ಷಿ, ದೇವರ ಚಿತ್ರಗಳು ಅರಳಿವೆ. ಒಟ್ಟಿನಲ್ಲಿ ಫಲಪುಷ್ಪ ಪ್ರದರ್ಶನವೂ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದು ಪ್ರವಾಸಿಗರು ಇವಿಗಳನ್ನೆಲ್ಲ ತಮ್ಮ ನಯನಗಳಲ್ಲಿ ಮಾತ್ರವಲ್ಲದೇ ನೆನಪಿಗಾಗಿ ಕ್ಯಾಮರಾ ಕಣ್ಣಲ್ಲಿಯೂ ಸೆರೆ ಹಿಡಿಯುತ್ತಿರುವುದು ಕಂಡು ಬಂತು.

Leave a Reply

comments

Related Articles

error: