ಮೈಸೂರು

ದೇವರಾಜ ಅರಸು ಕೇವಲ ಆದರ್ಶ ವ್ಯಕ್ತಿಯಲ್ಲ ಮಹಾನ್ ಚೇತನ: ಮಾನೆ

ಮೈಸೂರು, ಜೂ.೬: ಹಿಂದುಳಿದ, ದಲಿತರ ಶ್ರೇಯೋಭಿವೃದ್ಧಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಕೇವಲ ಆದರ್ಶ ವ್ಯಕ್ತಿಯಲ್ಲ ಮಹಾನ್ ಚೇತನ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ಅಭಿಪ್ರಾಯಪಟ್ಟರು.
ಮಂಗಳವಾರ ಮಹಿಳೆಯರ ಪುನರ್ವಸತಿ ಹಾಗೂ ಅಭಿವೃದ್ಧಿ ಕೇಂದ್ರ ಶಕ್ತಿಧಾಮದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಒಂದು ನೆನಪು ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ದೇವರಾಜು ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೂರಾರು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದರು. ಅವರ ಒಂದೊಂದು ಯೋಜನೆಗಳು ನೂರಾರು ವರ್ಷಗಳು ಉರುಳಿದರು ನೆನಪಿನಲ್ಲಿ ಉಳಿಯುವಂತಹವು. ಭೂ ಸುಧಾರಣೆ ಕಾಯ್ದೆ, ಉಳುವವನೆ ಭೂಮಿಯ ಒಡೆಯ, ದೇವರಾಜ ಅರಸು ನಾಲೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಇಷ್ಟಲ್ಲದೆ ಗೇಣಿಗಾದರರಿಗೆ ೪ ಎಕರೆ ಜಮೀನನ್ನೇ ದಾನ ಮಾಡಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಡಾ.ಮಹೇಶ್ ಚಂದ್ರಗುರು, ನೇಕಾರ ಸಮುದಾಯದ ಮುಖಂಡ ಅಶ್ವತ್ಥನಾರಾಯಣ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ದಿವಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: