ಕರ್ನಾಟಕಮೈಸೂರು

ಫಲಾನುಭವಿಗಳು ಆದಷ್ಟು ಬೇಗ ಮನೆ ನಿರ್ಮಿಸಿಕೊಳ್ಳಿ: ನಾಗೇಶ್

ವಿವಿಧ ವಸತಿ ಯೋಜನೆಗಳ ಮೂಲಕ ಮಂಜೂರಾಗಿರುವ ಮನೆಗಳಿಗೆ ಆಯ್ಕೆಯಾಗಿರುವ ಫಲಾನುಭವಿಗಳು ಆದಷ್ಟು ಬೇಗ ಮನೆಗಳನ್ನು ನಿರ್ಮಿಸಿಕೊಳ್ಳಬೇಕೆಂದು ಯಳಂದೂರು ತಾಲೂಕಿನ ಯರಗಂಬಳ್ಳಿ ಗ್ರಾಮಪಂಚಾಯತ್ ಕಾರ್ಯದರ್ಶಿ ನಾಗೇಶ್ ತಿಳಿಸಿದರು.

ಯರಗಂಬಳ್ಳಿ ಗ್ರಾಮಪಂಚಾಯತ್ ಕಚೇರಿ ಆವರಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ನಾಗೇಶ್ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ 57, ಅಂಬೇಡ್ಕರ್ ವಸತಿ ಯೋಜನೆಯಲ್ಲಿ 116, ಬಸವ ವಸತಿ ಯೋಜನೆಯಲ್ಲಿ 40ಮನೆಗಳು ಸೇರಿದಂತೆ ಒಟ್ಟು 213 ಮನೆಗಳು ಗ್ರಾಮಪಂಚಾಯತ್ ಗೆ ಮಂಜೂರಾಗಿದ್ದು ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳು ಬೇಗ ಮನೆಗಳನ್ನು ನಿರ್ಮಿಸಿಕೊಂಡು ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಸಭೆಯಲ್ಲಿ ಮರಳಿನ ಸಮಸ್ಯೆಯನ್ನು ಬಗೆ ಹರಿಸಲು ಒತ್ತಾಯ

ಸರ್ಕಾರವು ವಿವಿಧ ವಸತಿ ಯೋಜನೆಯಡಿಯಲ್ಲಿ ಮನೆಗಳನ್ನು ನೀಡಿದ್ದು ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳು ಬೇಗ ಮನೆಗಳನ್ನು ನಿರ್ಮಿಸಿಕೊಳ್ಳುವಂತೆ ಸೂಚನೆಯನ್ನೇನೋ ನೀಡಲಾಗಿದೆ. ಆದರೆ ಮನೆಗಳನ್ನು ನಿರ್ಮಿಸಿಕೊಳ್ಳಲು ಮರಳಿನ ಸಮಸ್ಯೆಯಿದೆ. ಶೌಚಾಲಯಗಳನ್ನು ನಿರ್ಮಿಸಲೂ ಸಹ ಮರಳು ಸಿಗುತ್ತಿಲ್ಲ. ಜನತೆಗೆ ಇದರಿಂದ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಕೂಡಲೇ ಮರಳಿನ ಸಮಸ್ಯೆ ಬಗೆಹರಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ನೋಡಲ್ ಅಧಿಕಾರಿ ಎಇಇ ರವಿಕುಮಾರ್ ಮಾತನಾಡಿ ಜಿಲ್ಲಾಮಟ್ಟದ ಸಭೆಗಳಲ್ಲಿ ಈಗಾಗಲೇ ಮರಳಿನ ಸಮಸ್ಯೆಗಳ ಕುರಿತು ಚರ್ಚಿಸಲಾಗಿದ್ದು, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗ್ರಾಮಪಂಚಾಯತ್ ವತಿಯಿಂದ ಪರವಾನಗಿ ಪಡೆದು ಮನೆಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸಭೆಯಲ್ಲಿ 2015-16ನೇ ಸಾಲಿನ ಜಮಾಬಂಧಿಯನ್ನು ಮಂಡಿಸಲಾಯಿತು. ಗ್ರಾಮಪಂಚಾಯತ್ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷೆ ಉಷಾ, ತಾಲೂಕುಪಂಚಾಯತ್ ಉಪಾಧ್ಯಕ್ಷೆ ಪದ್ಮಾವತಿ, ಗ್ರಾಮಪಂಚಾಯತ್ ಸದಸ್ಯರಾದ ನಾಗರಾಜು, ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: