ಮೈಸೂರು

ಯರಗಂಬಳ್ಳಿ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆ ನಿಲ್ಲಿಸಿ: ಗ್ರಾಮಸ್ಥರ ಆಗ್ರಹ

ಯಳಂದೂರು ತಾಲೂಕಿನ ಯರಗಂಬಳ್ಳಿ ಗ್ರಾಮದ ಸುತ್ತಮುತ್ತ ನಡೆಸುತ್ತಿರುವ ಕರಿಕಲ್ಲು ಗಣಿಗಾರಿಕೆಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಕರಿಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಿ ಜನರಿಗೆ ಅನುಕೂಲ ಮಾಡಿ ಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಯರಗಂಬಳ್ಳಿ ಗ್ರಾಮಸಭೆಯ ಬಳಿಕ ಗ್ರಾಮಪಂಚಾಯತ್ ನ ಜನಪ್ರತಿನಿಧಿಗಳು, ಗ್ರಾಮಪಂಚಾಯತ್ ಅಧಿಕಾರಿಗಳು, ನೋಡಲ್ ಅಧಿಕಾರಿಗಳನ್ನೊಳಗೊಂಡ ತಂಡ ಗ್ರಾಮಸ್ಥರೊಡನೆ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಕರಿಕಲ್ಲು  ಗಣಿಗಾರಿಕೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಯರಗಂಬಳ್ಳಿ ಗ್ರಾಮದ ಸುತ್ತಮುತ್ತ ಪಂಚಾಯತ್ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಸುಮಾರು ವರ್ಷಗಳಿಂದ ಕರಿಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಹತ್ತಿರದಲ್ಲಿಯೇ ಶಾಲೆಯೂ ಇದ್ದು ಮಕ್ಕಳಿಗೆ ಪಾಠಕ್ಕೆ ತೊಂದರೆಯಾಗುತ್ತಿದೆ. ಗ್ರಾಮದ ಸುತ್ತಮುತ್ತಲಿನ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಭೂಮಾಲಿನ್ಯ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.

ನೋಡಲ್ ಅಧಿಕಾರಿ ಎಇಇ ರವಿಕುಮಾರ್, ಗ್ರಾಪಂ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷೆ ಉಷಾ ಸೇರಿದಂತೆ ಗ್ರಾಮಸ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆದರೆ ಇದೇ ವೇಳೆ ತಮ್ಮ ಒಡೆತನದಲ್ಲಿ ನಡೆಯುತ್ತಿರುವ ಕರಿಕಲ್ಲು ಗಣಿಗಾರಿಕೆ ಕಾನೂನು ಬದ್ಧವಾಗಿದ್ದು, ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ಅನುಮತಿ ಪಡೆಯಲಾಗಿದೆ. ತಾವು ನಡೆಸುತ್ತಿರುವ ಗಣಿಗಾರಿಕೆಯಿಂದ ಗ್ರಾಮಸ್ಥರಿಗೆ ಯಾವುದೇ ತೊಂದರೆ ಇಲ್ಲ ಎಂದು ಗಣಿಗಾರಿಕೆ ನಡೆಸುತ್ತಿರುವ ಮಾಲಿಕರು ತಮ್ಮನ್ನು ತಾವೇ ಸಮರ್ಥಿಸಿಕೊಂಡಿದ್ದಾರೆ.

Leave a Reply

comments

Related Articles

error: