ಪ್ರಮುಖ ಸುದ್ದಿಮೈಸೂರು

ಜೆಡಿಎಸ್ ಕುತಂತ್ರಕ್ಕೆ ಬಲಿಯಾಗದಂತೆ ಹೆಚ್. ವಿಶ್ವನಾಥ್ ಗೆ ಮನವಿ

ಮೈಸೂರು.ಜೂ.7 :- ಸಾವಿನ ಮನೆಯಂತಿರುವ ಜೆಡಿಎಸ್ ಪಕ್ಷದ ಮುಖಂಡರ ಕುತಂತ್ರಕ್ಕೆ ಬಲಿಯಾಗಿ ಮಾಜಿ ಸಂಸದ ಹೆಚ್. ವಿಶ್ವನಾಥ್ ಪಕ್ಷ ತೊರೆಯಬಾರದು. ಅವರ ಹಿರಿತನ, ಅನುಭವ ಕಾಂಗ್ರೆಸ್ ಗೆ ಅಗತ್ಯವಿದೆ ಎಂದು ಚಾಮುಂಡೇಶ್ವರಿ ಬ್ಲಾಕ್ ಮುಖಂಡರು ಮನವಿ ಮಾಡಿದ್ದಾರೆ.

ಮೈಸೂರು ಪತ್ರಕರ್ತರ ಭವನದಲ್ಲಿ ಕಾಂಗ್ರೆಸ್ ನ ಮೆಲ್ಲಹಳ್ಳಿ ಮಹದೇವಸ್ವಾಮಿ, ನಾಗನಹಳ್ಳಿ ಉಮಾಶಂಕರ್ ಜಂಟಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿ ದೇವರಾಜು ಅರಸು ಮೂಲಕ ರಾಜಕೀಯ ಆರಂಭಿಸಿದ ವಿಶ್ವನಾಥ್ ಅವರು ಕಾಂಗ್ರೆಸ್ ನಲ್ಲಿಯೇ ದುಡಿದು ಸಚಿವರು ಸಂಸದರು ಆಗಿದ್ದರು. ಪಕ್ಷ ಅವರನ್ನು ಗೌರವಯುತವಾಗಿ ನಡೆಸಿಕೊಂಡಿದ್ದು ಮುಂದೆಯೂ ಅವರಿಗೆ ರಾಜಕೀಯ ಭವಿಷ್ಯವಿದೆ. ಆದರೆ ಕೆಲವು ಘಟನೆಗಳಿಂದ ಮನನೊಂದು ಪಕ್ಷ ತೊರೆಯುವ ನಿರ್ಧಾರ ಮಾಡಿರುವುದು ತರವಲ್ಲವೆಂದು  ತಿಳಿಸಿದರು.

ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನೇ ದೊಡ್ಡದು ಮಾಡಿಕೊಳ್ಳುತ್ತಿರುವ ವಿಶ್ವನಾಥ್ ಅವರು ದೀನ ದಲಿತರ ಎಲ್ಲಾ ಸಮಾಜದವರ ಪರವಾಗಿ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಜೆಡಿಎಸ್ ಜೊತೆ ಕೈಜೋಡಿಸಲು ಸರ್ಕಾರದ ಜನೋಪಯೋಗಿ ಕೆಲಸವನ್ನು ದೂಷಿಸುವುದು ಅವರ ಮುತ್ಸದಿತನಕ್ಕೆ ತರವಲ್ಲ ಎಂದು ಟೀಕಿಸಿದರು.

ಪಕ್ಷದ ಆಂತರಿಕ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸುವುದು ಬಿಟ್ಟು ಬಹಿರಂಗವಾಗಿ ಮಾಧ್ಯಮಗಳ ಮೂಲಕ ಮುಖಂಡರ ವಿರುದ್ಧ ದೂಷಣೆ ಮಾಡುವುದು ಬಿಟ್ಟು ಪಕ್ಷದ ಏಳ್ಗಿಗೆ ಕೈ ಜೋಡಿಸುವ ಮೂಲಕ ಪಕ್ಷದ ಋಣ ತೀರಿಸಬೇಕು. ಕಾಂಗ್ರೆಸ್ ನಲ್ಲಿಯೇ ಇದ್ದು ಕಾಂಗ್ರೆಸ್ ಬಗ್ಗೆ ಮಾತನಾಡುವುದು ಅವರಿಗೆ ಶ್ರೇಯಸ್ಸಲ್ಲ ಅಸಮಾಧಾನವಿದ್ದರೆ ಮುಖ್ಯಮಂತ್ರಿಗಳ ಜೊತೆ ಪಕ್ಷದ ಅಧ್ಯಕ್ಷರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಕೋರಿದರು.

ಮುಖಂಡರಾದ ಎಂ.ಎಸ್.ಎಸ್. ಕುಮಾರ್, ಕೆ.ಎಸ್.ಸಿದ್ದರಾಜು, ಕೃಷಿ ನಾಯಕ್ ಹೆಚ್. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ: ಕೆ.ಎಂ.ಆರ್,ಎಸ್.ಎಚ್)

Leave a Reply

comments

Related Articles

error: