ದೇಶಪ್ರಮುಖ ಸುದ್ದಿವಿದೇಶ

ಯುವ ಜನತೆಯನ್ನು ಸಂಘಟಿಸುವ ಹೊಣೆ ಯುವ ಕಾಂಗ್ರೆಸ್‍ ಮೇಲಿದೆ: ಸಿ.ಎಂ. ಸಿದ್ದರಾಮಯ್ಯ

ರಾಜ್ಯ (ಪ್ರಮುಖ ಸುದ್ದಿ) ಬೆಂಗಳೂರು, ಜೂ. 7 : ಯುವಕರನ್ನು ಸಂಘಟನೆ ಮಾಡುವ ಜವಾಬ್ದಾರಿ ಯುವ ಕಾಂಗ್ರೆಸ್ ಸಮಿತಿಗೆ ಇದೆ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಸಿದ್ಧಾಂತ ಇದೆ. 130 ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಸದ್ಯಸರು ನಾವು ಎಂದು ಹೆಮ್ಮೆಪಡಬೇಕು. ಕಾಂಗ್ರೆಸ್ ಪಕ್ಷ ರಾಜಕೀಯ ಪಕ್ಷ ಮಾತ್ರವಲ್ಲ, ಅದೊಂದು ಚಳುವಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹೊಸದಾಗಿ ನೇಮಕವಾಗಿರುವ ನೂತನ ಯುವ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಲುವಾಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ಹೊಸ ಪದಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದರು.

ಯುವ ಕಾಂಗ್ರೆಸ್ಸಿಗರು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಅರಿಯಬೇಕು. ತ್ಯಾಗ ಬಲಿದಾನ ಆಗಿದ್ರೆ ಅದು ಕಾಂಗ್ರೆಸ್‍ನಲ್ಲಿ ಮಾತ್ರ. 2004 ರಲ್ಲಿ ಸೋನಿಯಾ ಗಾಂಧಿಯವರಿಗೆ ಪ್ರಧಾನ ಮಂತ್ರಿ ಆಗುವ ಅವಕಾಶ ಸಿಕ್ಕಾಗ ಮನಮೋಹನ ಸಿಂಗ್ ಅವರನ್ನು ಪ್ರಧಾನಿ ಮಾಡಿದ್ರು. ಮಹಾತ್ಮಾ ಗಾಂಧಿಜಿ, ಅಂಬೇಡ್ಕರ್, ಲೋಹೀಯ ಸಿದ್ಧಾಂತ ತಿಳಿದುಕೊಂಡರೆ ಕಾಂಗ್ರೆಸ್ ಸಿದ್ಧಾಂತ ಅರಿವಾಗುತ್ತದೆ ಎಂದರು.

ಬಿಜೆಪಿ ವಿರುದ್ಧ ವಾಗ್ದಾಳಿ :

ಬಿಜೆಪಿಯು “ಸಬ್ ಕಾ ಸಾತ್ – ಸಬ್ ಕಾ ವಿಕಾಸ್” ಎಂದು ಹೇಳುತ್ತದೆ. ಮುಸ್ಲಿಂ, ಕ್ರೈಸ್ತ, ದಲಿತರನ್ನು ಬಿಟ್ಟು ವಿಕಾಸ್ ಅಂತಾರೆ. ಇದೇ ಡೋಂಗಿ ರಾಜಕರಣ. ಸಮಾಜವನ್ನು ಧರ್ಮದ ಹೆಸರಿನಲ್ಲಿ ಒಡೆಯುವ ಕೆಲಸ. ದೆಹಲಿ ಸರ್ಕಾರ ಗೋಹತ್ಯೆ ನಿಷೇಧ ಆದೇಶ ಹೊರಡಿಸಿದೆ. ಇದು ರಾಜ್ಯದ ವಿಷಯ. ರಾಜ್ಯದ ಅಧಿಕಾರದ ಮೇಲೆ ಅತಿಕ್ರಮಣ ಮಾಡಲಾಗುತ್ತಿದೆ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದರು.

ಮೋದಿ ಸರ್ಕಾರಕ್ಕೆ ಮೂರು ವರ್ಷ ಆಯ್ತು. ಚುನಾವಣೆ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸಿಲ್ಲ. ಜಿಎಸ್‍ಟಿ ಮಸೂದೆ ಮನಮೋಹನ ಸಿಂಗ್ ಅವರು ರೂಪಿಸಿದ್ದ ಮಸೂದೆ. ಗುಜರಾತ್‍ನಲ್ಲಿ ಸಿಎಂ ಆಗಿದ್ದಾಗ ಮೋದಿ ಇದಕ್ಕೆ ವಿರೋಧ ಮಾಡಿದ್ರು. ಈಗ ಕಾಂಗ್ರೆಸ್ ರೂಪಿಸಿದ್ದ ಕಾಯ್ದೆ ಜಾರಿ ಮಾಡ್ತಾ ಇದ್ದಾರೆ ಎಂದು ಟೀಕಿಸಿದರು.

ವಿದೇಶದಲ್ಲಿ ಕಪ್ಪು ಹಣ ಇದೆ. 3 ದಿನದಲ್ಲಿ ಹೊರಗಡೆ ತೆಗೆದುಕೊಂಡು ಪ್ರತಿ ವ್ಯಕ್ತಿಗೆ 15 ಲಕ್ಷ ರೂ. ಹಾಕ್ತೀವಿ ಅಂತ ಮೋದಿ ಹೇಳಿದ್ರು. 15 ರೂಪಾಯಿನೂ ಹಾಕಿಲ್ಲ. ಕಪ್ಪು ಹಣದಿಂದ ನಿದ್ದೆ ಗೆಡಿಸುತ್ತೀವಿ ಅಂತ ಹೇಳಿದ್ರು. ಆದ್ರೆ ಸಾಮಾನ್ಯ ಜನ ಸತ್ತರು. ಕಪ್ಪು ಹಣ ಇರುವರು ಒಬ್ಬರೂ ಸತ್ತಿಲ್ಲ. ನೋಟ್ ಬ್ಯಾನ್ ನಂತರ ಜನಾರ್ದನ ರೆಡ್ಡಿ ಕೋಟ್ಯಂತರ ರೂ. ವೆಚ್ಚದಲ್ಲಿ ಮಗಳ ಮದುವೆ ಮಾಡಿದರು ಎಂದು ಸಿಎಂ ವ್ಯಂಗ್ಯ ಮಾಡಿದರು.

-ಎಸ್.ಎನ್/ಎನ್.ಬಿ.ಎನ್.

Leave a Reply

comments

Related Articles

error: