ಮೈಸೂರು

ಪ್ರೇಕ್ಷಕರ ಮನಗೆದ್ದ ಕಾವಾಡಿಗರ ಮಕ್ಕಳ ನೃತ್ಯ

makkala-dasara-1ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಲ್ಲಿ ನೋಡಿದರೂ ಸಂಸ್ಕೃತಿಯ ಅನಾವರಣ. ಪ್ರೇಕ್ಷಕರಿಗಂತೂ ಸಾಂಸ್ಕೃತಿಕ  ಹಬ್ಬದ ಹೂರಣ. ಜಗನ್ಮೋಹನ ಅರಮನೆಯಲ್ಲಿ ನಡೆಯುತ್ತಿರುವ ಮಕ್ಕಳ ದಸರಾದಲ್ಲಿ ಚಿಣ್ಣರ ನೃತ್ಯಗಳಿಗೆ ಪ್ರೇಕ್ಷಕರು ಮನಸೋತರು.

ಎದೆತುಂಬಿ ಹಾಡುವೆನು ಕಾರ್ಯಕ್ರಮದ ವಿಜೇತೆ ಮೈಸೂರಿನ ರುಚಿತಾ ರಾಜೇಶ್ ಸುಗಮ ಸಂಗೀತದ ರಸದೌತಣ ಬಡಿಸಿದರು. ಗಣಪತಿಸ್ತುತಿ “ಜಯಗಣರಾಯ ಶ್ರೀಗಣರಾಯ….” ಎಂದು ಹಾಡುತ್ತಿದ್ದರೆ ಪ್ರೇಕ್ಷಕರು ತಲೆತೂಗುತ್ತಿದ್ದರು. ಮಾವುತರು ಮತ್ತು ಕಾವಾಡಿಗರ ಮಕ್ಕಳಿಗೆ ಈ ಬಾರಿ ವಿಶೇಷ ಅವಕಾಶ ನೀಡಲಾಗಿತ್ತು. ಅವರು ಹಲವು ಕನ್ನಡ ಗೀತೆಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು. “ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ..” ಎಂದು ಹೆಜ್ಜೆ ಹಾಕುತ್ತಿದ್ದರೆ ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳಂತೂ ಶಿಳ್ಳೆ ಕೇಕೆ ಹಾಕುತ್ತಾ ಹುರಿದುಂಬಿಸುತ್ತಿದ್ದರು.

ಕಿರಣ್ ಕಾಮತ್ ಭರತನಾಟ್ಯ ಮಯೂರಿಯಂತೆ ನರ್ತಿಸಿ ಪ್ರೇಕ್ಷಕರ ಮನಗೆದ್ದರು. ದಶಾವತಾರ ಪ್ರದರ್ಶನ ನೋಡಿ ಎಲ್ಲರೂ ಮೂಕವಿಸ್ಮಿತರಾದರು. ಚಾಮುಂಡೇಶ್ವರಿ ದೇವಿಯ “ಹಯಗಿರಿ ನಂದಿನಿ ನಂದಿತ ಮೇಧಿನಿ…. ಹಾಡಿಗೆ ಮಾಡಿದ ನೃತ್ಯವಂತೂ ನೋಡಗರ ಕಣ್ಮನ ಸೂರೆಗೊಂಡಿತ್ತು. ಪುಟಾಣಿ ಮಕ್ಕಳು “ಒಂದು-ಎರಡು ಬಾಳೆಲೆ ಹರಡು… ಮೂರು-ನಾಲ್ಕು ಅನ್ನ ಹಾಕು…” ಎಂದು ತೊದಲು ನುಡಿಗಳಲ್ಲಿ ಹಾಡಿ ರಂಜಿಸಿದರು.

ಅಲ್ಲದೇ ಹುಣಸೂರಿನ ಪ್ರೌಢಶಾಲಾ ವಿದ್ಯಾರ್ಥಿಗಳಿಂದ  ಕುವೆಂಪು ಅವರ “ಜಲಗಾರ” ನಾಟಕ ಪ್ರದರ್ಶನಗೊಂಡಿತು. ಶಿವನಿಗೆ ಹಣ್ಣು ಕಾಯಿಯ ಪೂಜೆಗಿಂತ ಕರ್ಮದ ಪೂಜೆ ಮಾಡುವುದೇ ನಿಜವಾದ ಭಕ್ತಿ. ಇಲ್ಲಿ ಜಲಗಾರನೇ ಶಿವನ ನಿಜಭಕ್ತನಾಗುವ ಪರಿ ನೋಡುಗರ ಮನ ಸೆಳೆಯಿತು.

ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.

Leave a Reply

comments

Related Articles

error: