ಮೈಸೂರು

ನಾಟ್ಯ ಮಯೂರಿ ಕಿರಣ್ ಕಾಮತ್‍ರ ನೃತ್ಯ ವೈಭವ

ಈಕೆಯ ನರ್ತನ ನವಿಲು ಕೂಡ ನಾಚಿಸುವಂತಹ ಮೋಹಕ ನೃತ್ಯ. ಅದ್ಭುತ ಮುಖ ಭಾವ, ಅನನ್ಯ ದೇಹ ಭಂಗಿ… ಅಬ್ಬಾ..! ಈಕೆಯ ನೃತ್ಯವನ್ನು ನೋಡುತ್ತಿದ್ದರೆ ನಟರಾಜನೇ ಧರೆಗಿಳಿದು ಬಂದು ನರ್ತಿಸಿದಂತೆ ಭಾಸವಾಗುತ್ತದೆ. ಇವಳ ನೃತ್ಯಕ್ಕೆ ಮನಸೋತು ತಲೆದೂಗದವರೇ ಇಲ್ಲ. ಪ್ರೇಕ್ಷಕರಿಗೆ ಇಂತಹ  ಭವ್ಯ ರಸದೌತಣವನ್ನು ಉಣಬಡಿಸುವ ಅದ್ಭುತ ನಾಟ್ಯ ಮಯೂರಿ ಕಿರಣ್ ಕಾಮತ್.

story-1ಇಂತಹ ಒಂದು ಭವ್ಯ ಪ್ರತಿಭೆಯ ಅನಾವರಣವಾಗಿದ್ದು ಜಗನ್ಮೋಹನ ಅರಮನೆಯ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ. ಇದೇ ಮೊದಲ ಬಾರಿಗೆ ಮೈಸೂರು ದಸರಾದಲ್ಲಿ ಪ್ರದರ್ಶನ ನೀಡಿ ಜನರ ಮೆಚ್ಚುಗೆ ಮತ್ತು ಪ್ರೀತಿಗೆ ಪಾತ್ರಳಾಗಿದ್ದಾಳೆ.

ಈಕೆ ಬಾಲ ಪ್ರತಿಭೆ. ಆದರೆ ಸಾಧನೆ ಮಾತ್ರ ಬಾಲ್ಯವನ್ನು ಮೀರಿದ್ದು. ಆರನೇ ತರಗತಿ ಓದುತ್ತಿರುವ ಹನ್ನೊಂದು ವರ್ಷದ ಈ ಪುಟ್ಟ ಬಾಲಕಿ ದಿನೇಶ್ ಕಾಮತ್ ಮತ್ತು ಸಾಧನಾ ಕಾಮತ್ ಅವರ ಮಗಳು. ಮೂಲ ಮಂಗಳೂರಿನವರಾದ ಇವರು ಸದ್ಯಕ್ಕೆ ನೆಲೆಸಿರುವುದು ಬೆಂಗಳೂರಿನಲ್ಲಿ. ಮಗಳ ಸಾಧನೆಯಲ್ಲಿಯೇ ಖುಷಿಪಡುವ ಇವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಸಾಧನೆ ಮಾಡಿರುವ ಈಕೆಗೆ ಅವಳ ತಂದೆ-ತಾಯಿಯೇ ಸ್ಫೂರ್ತಿ.

7 ವರ್ಷಗಳಿಂದ ನಾಟ್ಯಾಚಾರ್ಯ ಮಿಥುನ್ ಶಾಮ್ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾಳೆ. ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ಕೂಡ ಈಕೆ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಪ್ರತಿವರ್ಷ ನಡೆಯುವ ‘ಮಂಗಳೂರು ದಸರಾ’ ದಲ್ಲಿ ತಪ್ಪದೇ ತನ್ನ ಪ್ರದರ್ಶನ ಕೊಡುತ್ತಾ ಬಂದಿದ್ದಾಳೆ. ಈಗಾಗಲೇ ದೂರದರ್ಶನದಲ್ಲಿ ಈ ವರ್ಷದಲ್ಲೇ ಆರು ಪ್ರದರ್ಶನಗಳನ್ನು ನೀಡಿದ್ದು, ಇನ್ನೂ ಎರಡು ಪ್ರದರ್ಶನಗಳನ್ನು ಕೊಡುವ ತರಾತುರಿಯಲ್ಲಿದ್ದಾಳೆ. ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ನಾಟ್ಯ ಪ್ರದರ್ಶನ ನೀಡುವುದು ಸಾಮಾನ್ಯ. ಆದರೆ ಕೊಂಕಣಿ ಮತ್ತು ತುಳು ಭಾಷೆಯಲ್ಲಿ ಒಂದು ಸಂಪೂರ್ಣ ನೃತ್ಯ ಮಾಡುವ ಕಲೆಗಾರ್ತಿ ಈಕೆ ಮಾತ್ರ.story-3

2014 ರ ಕರಾವಳಿ ಉತ್ಸವ, 2015 ರ ಹಂಪಿ ಉತ್ಸವಗಳಲ್ಲೂ ಕೂಡ ನಾಟ್ಯ ಮಯೂರಿಯಾಗಿ ನರ್ತಿಸಿದ್ದಾಳೆ. ಚಿದಂಬರಂನ ನಟರಾಜ ದೇವಾಲಯ, ಗೋಕರ್ಣದ ವೆಂಕಟರಮಣ ದೇವಾಲಯ, ಉಡುಪಿ ಶ್ರೀಕೃಷ್ಣನ ದೇವಾಲಯ, ಕಾರ್ಕಳದ ವೆಂಕಟರಮಣ ದೇವಾಲಯ, ಮಂಗಳೂರಿನ ಅನೇಕ ದೇವಾಲಯಗಳು, ಮಧುರೈನ ಮೀನಾಕ್ಷಿ ದೇವಾಲಯ, ಕುಂಭಕೋಣಂ, ವೆಲ್ಲೂರು, ನಾರಾಯಣಿ ಗೋಲ್ಡನ್ ಟೆಂಪಲ್ ಮತ್ತು ಕೇರಳದ ಗುರುವಾಯುರ್ ದೇವಾಲಯಗಳಲ್ಲಿ ನಾಟ್ಯ ಪ್ರದರ್ಶನ ನೀಡಿದ್ದಾಳೆ. ಕಿರಣ್ ತನ್ನ ಈ ಅದ್ಭುತ ಪ್ರತಿಭೆಯಿಂದಾಗಿ ‘ಕರ್ನಾಟಕ ಬಾಲ ಪ್ರತಿಭೆ’ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ.

ಕಿರಣ್ ಭರತನಾಟ್ಯ ಮಾತ್ರವಲ್ಲದೇ, 5 ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದಾಳೆ. ಜೊತೆಗೆ ಚಿತ್ರಕಲೆಯಲ್ಲೂ ಸಹ ಆಸಕ್ತಿಯಿದ್ದು, ಅದ್ಭುತವಾಗಿ ಚಿತ್ರ ಬಿಡಿಸುತ್ತಾಳೆ. ಎರಡು ವರ್ಷಗಳಿಂದ ಯೋಗಾಭ್ಯಾಸವನ್ನು ಸಹ ಮಾಡುತ್ತಿರುವ ಈ ಬಹುಮುಖ ಪ್ರತಿಭೆ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸೋಣ.

ಲತಾ ಸಿ.ಜಿ.

 

Leave a Reply

comments

Related Articles

error: