ಕರ್ನಾಟಕ

ಜೂ.21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ

ರಾಜ್ಯ(ಮಡಿಕೇರಿ) ಜೂ.7:-ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್, 21 ರಂದು ಆಚರಿಸಬೇಕಿದ್ದು, ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ರಾಮಚಂದ್ರ ಅವರು ಮಾಹಿತಿ ನೀಡಿ ಜೂನ್, 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಬೇಕಿದ್ದು, ಅದಕ್ಕಾಗಿ ಅಗತ್ಯ ಸಹಕಾರಕ್ಕೆ ಅವರು ಮನವಿ ಮಾಡಿದರು. ಯೋಗ ದಿನಾಚರಣೆ ಆಚರಿಸುವ ಸಂಬಂಧ ನಗರದಲ್ಲಿ ಯಾವುದಾದರೂ ಉದ್ಯಾನವನಕ್ಕೆ ‘ಯೋಗ ಉದ್ಯಾನವನ’ ಎಂದು ನಾಮ ನಿರ್ದೇಶನ ಮಾಡಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವಂತೆ ಪೌರಾಯುಕ್ತರಲ್ಲಿ ಮನವಿ ಮಾಡಿದರು. ಯೋಗ ತರಬೇತಿಯನ್ನು  ಆರ್ಟ್ ಆಫ್ ಲಿವಿಂಗ್ ಇವರ ವತಿಯಿಂದ ಶಾಲಾ-ಕಾಲೇಜುಗಳಲ್ಲಿ ಯೋಗ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಯೋಗ ದಿನಾಚರಣೆ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ತಾ.ಪಂ.ಇಓಗಳನ್ನು ಕಾರ್ಯಕ್ರಮದ ಅನುಷ್ಠಾನ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಗ್ರಾ.ಪಂ.ಮಟ್ಟದಲ್ಲಿ ಪಿಡಿಓಗಳನ್ನು ನೋಡೆಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಯೋಗ ದಿನಾಚರಣೆ  ಸಂದರ್ಭದಲ್ಲಿ ನಗದು ಬಹುಮಾನ, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಬೇಕಿದೆ. ಯೋಗ ದಿನಾಚರಣೆ ಅಂಗವಾಗಿ ಗ್ರಾ.ಪಂ. ಮಟ್ಟದಲ್ಲಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಬಹುಮಾನ ನೀಡಬೇಕಿದೆ ಎಂದು ಅವರು ಮಾಹಿತಿ ನೀಡಿದರು.ಆರ್ಟ್ ಆಫ್ ಲಿವಿಂಗ್, ಟೀಚರ್ಸ್ ಕೋ ಆರ್ಡಿನೇಟರ್ ರಾಜಪ್ಪ, ಡಿಡಿಸಿ ಆರ್ಟ್ ಲಿವಿಂಗ್ ಆಗಿರುವ ಕೆ.ಡಬ್ಲ್ಯೂ. ಬೋಪಯ್ಯ, ಯೋಗ ಶಿಕ್ಷಕರಾದ  ಮಹೇಶ್ ಕುಮಾರ್ ಇವರ ನೇತೃತ್ವದಲ್ಲಿ ಯೋಗ ಜಾಥ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.‘ಅಂತರರಾಷ್ಟ್ರೀಯ ಯೋಗ ದಿನಾಚರಣೆಗೂ ಮೊದಲು ಜೂನ್, 18 ರಂದು ಬೆಳಗ್ಗೆ 7 ಗಂಟೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಯೋಗ ಜಾಥಾ ನಡೆಯಲಿದೆ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ರಾಮಚಂದ್ರ ಅವರು ತಿಳಿಸಿದರು.

ನಗರಸಭೆ ಪೌರಾಯುಕ್ತರಾದ ಬಿ.ಶುಭಾ, ಬಿ.ಸಿ.ಎಂ. ಅಧಿಕಾರಿ ಕೆ.ವಿ.ಸುರೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಕುಮಾರ, ಜಿಲ್ಲಾಸ್ಪತ್ರೆಯ ಡಾ.ಶುಭಾ, ಜಿಲ್ಲಾ ಉದ್ಯೋಗಾಧಿಕಾರಿ ಸಿ.ಜಗನ್ನಾಥ, ಕೆ.ಡಬ್ಲ್ಯೂ ಬೋಪಯ್ಯ, ರಾಜಪ್ಪ, ಮಹೇಶ್ ಕುಮಾರ್ ಇತರರು ಇದ್ದರು. (ವರದಿ: ಕೆಸಿಐ,ಎಸ್.ಎಚ್)

Leave a Reply

comments

Related Articles

error: