ಕರ್ನಾಟಕಮೈಸೂರು

ಗುತ್ತಿಗೆ ನೌಕರರ ಖಾಯಮಾತಿಗೆ ಆಗ್ರಹಿಸಿ ಪೌರ ಕಾರ್ಮಿಕರಿಂದ ಪ್ರತಿಭಟನೆ

ಮೈಸೂರು.ಜೂ.8 : ಗುತ್ತಿಗೆ ಪೌರಕಾರ್ಮಿಕರ ಖಾಯಮಾತಿ ಸೇರಿದಂತೆ ಇತರೆ ಮೂಲಭೂತ ಸವಲತ್ತುಗಳಿಗೆ ಆಗ್ರಹಿಸಿ ಇದೇ ಜೂ.12ರಂದು ಮಹಾನಗರಪಾಲಿಕೆಯ ಮುಂದೆ ಉಗ್ರ ಪ್ರತಿಭಟನೆಯನ್ನು ಪೌರ ಕಾರ್ಮಿಕ ಸಂಘಟನೆಗಳಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಪಾಯಿ ಕರ್ಮಚಾರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ವಿ.ವೆಂಕಟೇಶ್ ತಿಳಿಸಿದರು.

ಗುರುವಾರ, ಪತ್ರಕರ್ತರ ಭವನದಲ್ಲಿ ನಡೆದ  ಸುದ್ದಿಗೋಷ್ಠಿಯುನ್ನುದ್ದೇಶಿಸಿ ಮಾತನಾಡಿದ ವೆಂಕಟೇಶ್ ಅಧಿಕಾರಕ್ಕೆ ಬಂದರೆ ಪೌರ ಕಾರ್ಮಿಕರನ್ನು ಖಾಯಂಗೊಳಿಸುವುದಾಗಿ  ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು, ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳು ಗತಿಸಿದರೂ ಇಂದಿಗೂ ಮುಖ್ಯಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಖಂಡನೀಯವೆಂದು ಆಕ್ರೋಷ ವ್ಯಕ್ತಪಡಿಸಿದರು. ಸಿಎಂ ತವರು ಚಾಮುಂಡಿ ಕ್ಷೇತ್ರದಲ್ಲಿ ಪೌರ ಕಾರ್ಮಿಕರನ್ನು ಮ್ಯಾನ್ ಹೋಲ್ ಗೆ ಇಳಿಸಿದ ಅಮಾನವೀಯ ಘಟನೆ ಘಟಿಸಿದೆ. ಅಲ್ಲದೇ  ಮಲ ಹೊರುವ ಪದ್ಧತಿ ಇನ್ನೂ ಜೀವಂತವಾಗಿದ್ದು ನಮ್ಮನ್ನು ಪ್ರಾಣಿಗಳಂತೆ ಹೀನಾಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಪೌರ ಕಾರ್ಮಿಕರ ಜೀವಕ್ಕೆ ಹಾಗು ಜೀವನಕ್ಕೆ ಯಾವುದೇ ಭದ್ರತೆ ಇಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿ ಕರ್ತವ್ಯ ನಿರತ ಸುಮಾರು 7ಜನ ಪೌರ ಕಾರ್ಮಿಕರು ಮೃತಪಟ್ಟಿದ್ದು  ಈ ಬಗ್ಗೆ ತನಿಖೆಯಾಗಲಿ ಸೂಕ್ತ ಕ್ರಮವಾಗಲಿ ಕೈಗೊಂಡಿಲ್ಲ, ಇಂದಿಗೂ ಆ ಕುಟುಂಬಗಳಿಗೆ ಯಾವುದೇ ಪರಿಹಾರ ದೊರೆತಿಲ್ಲವೆಂದು ತಿಳಿಸಿದರು.

ರಾಜ್ಯದಲ್ಲಿರುವ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು ಹಾಗೂ ಚುನಾವಣಾ ಪೂರ್ವದಲ್ಲಿ ಸರ್ಕಾರ ನೀಡಿದ ಭರವಸೆಯನ್ನು ಅನುಷ್ಠಾನಗೊಳಿಸಿ, ಈ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ವಿಸ್ತೃತ ಚರ್ಚೆಯಾಗಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಪೌರ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು

ಸುದ್ದಿಗೋಷ್ಠಿಯಲ್ಲಿ ಹುಣಸೂರು ಪುರಸಭೆ ಸದಸ್ಯ ಕೆ.ಲಕ್ಷ್ಮಣ್, ಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎನ್.ನರಸಿಂಹ, ಕಾರ್ಯದರ್ಶಿ ಆರ್.ವಿಜಯ್ ಹಾಗೂ ಧರ್ಮರಾಜು ಇದ್ದರು. (ಕೆ.ಎಂ.ಆರ್,ಎಸ್.ಎಚ್)

Leave a Reply

comments

Related Articles

error: