ಮೈಸೂರು

ಭೂಮಿಯಲ್ಲಿ ಬೆಂಕಿ, ಬಾಲಕ ಸಾವು ಪ್ರಕರಣ : ಅಪಾಯಕಾರಿ ತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿ ಕಾರಣ

ಮೈಸೂರು,ಜೂ.8:- ಭೂಮಿಯಲ್ಲಿ ಬೆಂಕಿಗೆ ಬಾಲಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೆ ಅಪಾಯಕಾರಿ ತ್ಯಾಜ್ಯದ  ಅವೈಜ್ಞಾನಿಕ ವಿಲೇವಾರಿಯೇ ಕಾರಣ ಎಂಬ ಅಂಶ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೇಮಿಸಿದ ಹತ್ತು ಸದಸ್ಯರ ಸಮಿತಿಯ ತನಿಖೆಯಿಂದ ಬೆಳಕಿಗೆ ಬಂದಿದೆ.
ನಗರದ ಹೊರವಲಯದಲ್ಲಿರುವ ಶ್ಯಾದನಹಳ್ಳಿಯ ಖಾಸಗಿ ಜಮೀನಿನಲ್ಲಿ ಏಪ್ರಿಲ್ 16 ರಂದು ಹರ್ಷಲ್ ಎಂಬ ಯುವಕ ಭೂಮಿಯಲ್ಲಿ ಕಾಣಿಸಿಕೊಂಡ ವಿಸ್ಮಯಕಾರಿ ಬೆಂಕಿಗೆ  ಬಿದ್ದು ಮೃತಪಟ್ಟಿದ್ದ. ಈ ಸಂಬಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿ.ಎಸ್ ಜೈ ಪ್ರಕಾಶ್ ನೇತೃತ್ವದ ಹತ್ತು ಸದಸ್ಯರ ಸಮಿತಿಯ ತನಿಖೆಗಾಗಿ ನೇಮಿಸಿತ್ತು. ಬಾಲಕ ಮೃತಪಟ್ಟ ಸ್ಥಳಕ್ಕೆ ಎರಡು ಬಾರಿ ಭೇಟಿ ನೀಡಿದ ಸಮಿತಿಯು ಮರಳು, ಮಣ್ಣು ಹಾಗೂ ಬೂದಿಯ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿತ್ತು. ಈ ಜಮೀನಿನಲ್ಲಿ 40×30 ಅಡಿ ವಿಸ್ತೀರ್ಣದ ಸ್ಥಳದಲ್ಲಿ ಮಾತ್ರ ಈ ತರಹದ ತ್ಯಾಜ್ಯವಿದ್ದು, ಭೂಮಿಯ ಎರಡೂವರೆಯಿಂದ ನಾಲ್ಕು ಅಡಿ ಆಳದವರಿಗೆ  ಕಂಡು ಬಂದಿದೆ. ಅನೇಕ ಕಾರ್ಖಾನೆಗಳು ಹಲವು ವರ್ಷಗಳಿಂದ ಇಲ್ಲಿ ಅಪಾಯಕಾರಿ ತ್ಯಾಜ್ಯ ವಿಲೇವಾರಿ ಮಾಡಿರುವುದು ಮೋಲ್ನೋಟಕ್ಕೆ ತಿಳಿದುಬಂದಿದ್ದು, ಯಾವ ಕಾರ್ಖಾನೆಗಳು ಹೀಗೆ ಬಿಸಾಡಿವೆ ಎನ್ನುವುದು ಪತ್ತೆಯಾಗಬೇಕಿದೆ. ಬಾಲಕ ಮೃತ ಪಟ್ಟ ಸ್ಥಳದಲ್ಲಿ ಪತ್ತೆಯಾದ ಬೂದಿಯಂಥ ತ್ಯಾಜ್ಯದಲ್ಲಿ ಅಲ್ಯೂಮಿನಿಯಂ ಹಾಗೂ ರಂಜಕ(ಪಾಸ್ಪರೆಸ್) ರಾಸಾಯನಿಕಗಳು ಹೆಚ್ಚಾಗಿ ಕಂಡು ಬಂದಿವೆ. ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಸಿದ್ದತೆಗಳು ನಡೆಯುತ್ತಿದ್ದು, ಮಂಡಳಿಯ ಸಭೆಯಲ್ಲಿ ನಿರ್ಧಾರವಾಗುವುದು ಬಾಕಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಬಾಲಕ ಮೃತಪಟ್ಟ ಸ್ಥಳದ ತಾಪಮಾನ 140 ಡಿಗ್ರಿಯಿಂದ 34ಕ್ಕೆ ಇಳಿದಿದೆ. ಸುತ್ತಲಿನ ಭೂಮಿಯಲ್ಲಿ 32 ಡಿಗ್ರಿ ಉಷ್ಣಾಂಶವಿದ್ದು, ಪರಿಸರ ಅಧಿಕಾರಿಗಳು ನಿತ್ಯವೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದು, ಮೂರು ಭಾಗದಲ್ಲಿ ಮಾಪನ ಇಟ್ಟು ತಾಪಮಾನ ದಾಖಲು ಮಾಡಿಕೊಳ್ಳುತ್ತಿದ್ದು ಸದ್ಯ 34 ಡಿಗ್ರಿ ತಾಪಮಾನ ದಾಖಲಾಗಿದೆ.
ಇದರ ಜೊತೆಗೆ ಬೆಂಕಿ ಕಾಣಿಸಿಕೊಂಡ ಸ್ಥಳದ ಸುತ್ತ ಜಾಲಿ, ಬೇವು, ತೆಂಗಿನ ಮರಗಳು ಸೇರಿದಂತೆ ಕುರುಚಲು ಗಿಡಗಳು ಭಸ್ಮವಾಗಿ  ಮರಳಿನಂತೆ ಕಾಣುತ್ತಿದ್ದ ಭೂಮಿ ಮೇಲೆ ಕಾಲಿಟ್ಟರೆ ಹೂತು ಹೋಗುತ್ತಿದ್ದವು. ಮಣ್ಣು ಕೆದರಿದರೆ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಸತತ ಸುರಿದ ಮಳೆಯಿಂದಾಗಿ ಸುಟ್ಟ ಕರಕಲಾಗಿದ್ದ ಜಮೀನಿನಲ್ಲಿ  ಕುರುಚಲು ಗಿಡಗಳು ಚಿಗುರಿವೆ.  ಬೆಂಕಿ ಕಾಣಿಸಿಕೊಂಡ ಸ್ಥಳದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: