
ಮೈಸೂರು
ರೈತರ ಮೇಲೆ ಮಧ್ಯಪ್ರದೇಶ ಸರ್ಕಾರ ನಡೆಸಿದ ಗೋಲಿಬಾರ್ ಗೆ ರೈತರಿಂದ ಆಕ್ರೋಶ : ಪ್ರತಿಭಟನೆ
ಮೈಸೂರು,ಜೂ.8:- ಪ್ರತಿಭಟನಾ ನಿರತ ರೈತರ ಮೇಲೆ ಗೋಲಿಬಾರ್ ನಡೆಸಿದ ಮಧ್ಯಪ್ರದೇಶ ಸರ್ಕಾರದ ವಿರುದ್ದ ಗುರುವಾರ ರಾಜ್ಯ ರೈತ ಸಂಘದ ನಂಜನಗೂಡು ತಾಲೂಕು ಘಟಕದ ವತಿಯಿಂದ ತಾಲೂಕು ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತರು ರೈತರ ಮೇಲೆ ಗೋಲಿಬಾರ್ ನಡೆಸಿದ ಮಧ್ಯಪ್ರದೇಶ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೊಶ ವ್ಯಕ್ತಪಡಿಸಿದರು. ರೈತರ ಮೇಲೆ ಗೋಲಿಬಾರ್ ನಡೆಸಿದ ಮಧ್ಯಪ್ರದೇಶ ಸರ್ಕಾರವನ್ನು ವಜಾಗೊಳಿಸಿ ಕೂಡಲೇ ವೈಜ್ಞಾನಿಕ ಬೆಲೆ ನಿಗದಿಗೊಳಿಸುವಂತೆ ತಹಶಿಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಮಧ್ಯಪ್ರದೇಶ ಸರ್ಕಾರ ರೈತರ ಮೇಲೆ ಗೋಲಿಬಾರ್ ಮಾಡಿ 5 ಜನ ರೈತರನ್ನು ಕೊಲೆ ಮಾಡಿದೆ. ಇಂತಹ ಕೊಲೆಗಡುಕ ಸರ್ಕರವನ್ನು ಕೂಡಲೇ ವಜಾಗೊಳಿಸಿ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಗೊಳಿಸುವಂತೆ ಒತ್ತಾಯಿಸಿದರು. ಇದೇ ಸಂದರ್ಭ ರಾಜ್ಯದ ರೈತರ ಸಾಲ ಮನ್ನಾ ಕುರಿತು ಪ್ರತಿಕ್ರಿಯಿಸಿದ ಅವರು ರೈತರ ಸಾಲ ಸಾಲವೇ ಅಲ್ಲ. ದೇಶದ ಆಹಾರ ಭದ್ರತೆಗಾಗಿ ಮತ್ತು ದೇಶದ ಜನತೆಗೆ ಅನ್ನ ನೀಡುವ ಸಲುವಾಗಿ ಮಾಡಿರುವ ಸಾಲಗಳು ಇಂತಹದ್ದನ್ನು ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ನಂಜನಗೂಡು ತಾಲೂಕು ಘಟಕದ ಅಧ್ಯಕ್ಷ ವಿದ್ಯಾಸಾಗರ್, ರೈತ ಸಂಘದ ಶಿರಮಳ್ಳಿ ಸಿದ್ದಪ್ಪ , ನಂಜುಂಡಸ್ವಾಮಿ ಸೇರಿದಂತೆ ವಿವಿಧ ರೈತ ಮುಖಂಡರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)