ಮೈಸೂರು

ಜನಾಂದೋಲನ ಮಹಾಮೈತ್ರಿ ಹೋರಾಟದ ಸಿದ್ಧತಾ ಸಭೆ ನಾಳೆ

ಕಾವೇರಿ ಸಮಸ್ಯೆ ಪರಿಹಾರಕ್ಕೆ ವಿಶೇಷ ಅಧಿವೇಶನ ಕರೆದಂತೆ, ರೈತರ ಸಮಸ್ಯೆ ಪರಿಹಾರಕ್ಕೆ ವಿಶೇಷ ಅಧಿವೇಶನ ಕರೆಯಬೇಕು. ಬರ-ನೆರೆ ನಿರ್ವಹಣೆ, ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ಮತ್ತು ಸಂಪೂರ್ಣ ಸಾಲ ಮನ್ನಾ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೇ.65:35ರ ಅನುಪಾತದಲ್ಲಿ ಜವಾಬ್ದಾರಿ ಹಂಚಿಕೊಳ್ಳಬೇಕು ಎಂದು ಆಗ್ರಹಿಸಿ ಜನಾಂದೋಲನ ಮಹಾಮೈತ್ರಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಜನಸಂಗ್ರಾಮ ಪರಿಷತ್ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ತಿಳಿಸಿದರು.

ಗುರುವಾರ ನಗರದ ಜಲದರ್ಶಿನಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪರವಾಗಿರದೆ, ಕಾರ್ಪೊರೇಟ್ ಸೆಕ್ಟರ್‌ಗಳ ಪರವಾಗಿವೆ. ಕೃಷಿಕರಿಗೆ ಒಳಿತಾಗುವ ಯಾವ ಕೆಲಸವನ್ನೂ ಮಾಡದೆ ಕೇವಲ ಲಾಭ ಗಳಿಕೆಗೋಸ್ಕರ ಆಡಳಿತ ನಡೆಸುತ್ತಿವೆ. ಹಾಗಾಗಿ ಎಲ್ಲರೂ ಒಂದಾಗಿ ಬದಲಾವಣೆ ತರುವ ಉದ್ದೇಶದಿಂದ ಜನಾಂದೋಲನ ಮಹಾಮೈತ್ರಿ ಸಮಿತಿ ರಚಿಸಿದ್ದು ಅ.13ರಂದು ಬೆಂಗಳೂರಿನಿಂದ ಆಂದೋಲನಕ್ಕೆ ಚಾಲನೆ ನೀಡಲಿದ್ದೇವೆ. ಅದರ ಪೂರ್ವಭಾವಿಯಾಗಿ ಅ.7ರಂದು ಮೈಸೂರಿನ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು ಜಿಲ್ಲಾ ಘಟಕವನ್ನು ಉದ್ಘಾಟಿಸಲಿದ್ದೇವೆ ಎಂದರು.

ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ದೇವನೂರ ಮಹಾದೇವ ಮಾತನಾಡಿ, ಇಂದು ಉರಿಯುತ್ತಿರುವ ಸಮಸ್ಯೆಗೆ ಮುಖಾಮುಖಿಯಾಗಲು ಹೊರಟಿದ್ದೇವೆ. ಒಂಟಿಯಾಗಿ ಯಾವುದನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಹಿಳೆಯರು, ದಲಿತರು, ರೈತರು, ಆದಿವಾಸಿಗಳು ಎಲ್ಲರೂ ಒಟ್ಟಾಗಿ ಹೋರಾಟ ಮಾಡಲು ಮುಂದಾಗಿದ್ದು ಅದಕ್ಕಾಗಿ ಜನಾಂದೋಲನ ಮಹಾಮೈತ್ರಿಯನ್ನು ರಚಿಸಿದ್ದೇವೆ. ಗೋಡೆ ಬರಹ ಯಾರಿಗೂ ಕೇಳಿಸುವುದಿಲ್ಲ. ನಮ್ಮನ್ನಾಳುತ್ತಿರುವ ಸರ್ಕಾರಕ್ಕೆ ಚರ್ಮ ದಪ್ಪ, ಕಣ್ಣು ಕುರುಡು, ಕಿವಿ ಕಿವುಡು, ಹೃದಯ ಕಲ್ಲು. ಹಾಗಾಗಿ ನಾವು ಎಷ್ಟೇ ಹೋರಾಟ ಮಾಡಿದರೂ ಅವರಿಗೆ ಕೇಳಿಸುವುದಿಲ್ಲ. ಅದಕ್ಕಾಗಿ ಜನಾಂದೋಲನದ ಮೂಲಕ ಆಮೂಲಾರ್ಗ ಬದಲಾವಣೆ ತರಬೇಕೆಂದು ಹೋರಾಟ ಮಾಡಲು ಎಲ್ಲರೂ ಒಟ್ಟಾಗಿದ್ದೇವೆ ಎಂದು ತಿಳಿಸಿದರು.

ಶಿಕ್ಷಣ ಪದ್ಧತಿಯಲ್ಲೇ ಪಂಕ್ತಿಭೇದ, ಜಾತಿಭೇದ ಮಾಡಲಾಗುತ್ತಿದೆ. ಇದರಿಂದ ದೇಶ ಇನ್ನಷ್ಟು ಛಿದ್ರವಾಗುತ್ತಿದೆ. ಫಾರಂ ಕೋಳಿಗಳನ್ನು ತಯಾರಿಸುವ ರೀತಿಯಲ್ಲಿ ಮಕ್ಕಳನ್ನು ತಯಾರಿಸಲಾಗುತ್ತಿದೆ. ಮೊದಲು ಈ ರೀತಿಯ ಶಿಕ್ಷಣ ಪದ್ಧತಿ ಬದಲಾಗಬೇಕು. ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡುವ ಬದಲು ಬೇರೆ ಧಾನ್ಯಗಳನ್ನು ನೀಡಬೇಕು. ಸಿರಿಧಾನ್ಯಗಳನ್ನು ಪ್ರೋತ್ಸಾಹಿಸಬೇಕು. ರೈತರಿಗೆ ಸಬ್ಸಿಡಿ ನೀಡಬೇಕು. ಸಂಶೋಧನಾ ಕ್ಷೇತ್ರ ಬದಲಾಗಬೇಕು. ಇದೆಲ್ಲದಕ್ಕಾಗಿ ಹೋರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

ಜನಸಂಗ್ರಾಮ ಪಕ್ಷದ ಗೌರವ ಅಧ್ಯಕ್ಷ ಎಸ್.ಆರ್.ಹಿರೇಮಠ್ ಮಾತನಾಡಿ, ರೈತರ, ಸಾರ್ವಜನಿಕರ, ಸಮಾಜದ ಸಮಸ್ಯೆಗಳನ್ನು ತೊಡೆದುಹಾಕಲು, ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಿ, ಹೊಸ ಬದಲಾವಣೆ ತರಲು ಇಂದು ಮಹಾಮೈತ್ರಿಯ ಐತಿಹಾಸಿಕ ಅವಶ್ಯಕತೆ ಇದೆ. ದೇಶವನ್ನಾಳುತ್ತಿರುವ ರಾಜಕಾರಣಿಗಳಿಗೆ ಜನರ ಬಗ್ಗೆ, ರೈತರ ಬಗ್ಗೆ, ದೇಶದ ಬಗ್ಗೆ ಚಿಂತನೆ ಇಲ್ಲ. ರೋಮ್‌ನ ಆಡಳಿತದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಡಳಿತ ನಡೆಸುತ್ತಿವೆ. ಕಾರ್ಪೊರೇಟ್ ಸೆಕ್ಟರ್‌ಗಳ ಪರವಾಗಿ ಕೆಲಸ ಮಾಡುತ್ತಿದ್ದು ಸುಮಾರು 1.4 ಲಕ್ಷ ಕೋಟಿ ಸಾಲಮನ್ನಾ ಮಾಡಿವೆ. ಆದರೆ, ರೈತರ 12 ಸಾವಿರ ಕೋಟಿ ಸಾಲಮನ್ನಾ ಮಾಡಲು ಮೀನಾಮೇಷ ಎಣಿಸುತ್ತಿವೆ ಎಂದರು.

ದೇಶದೆಲ್ಲೆಡೆ ರೈತರ ಸರಣಿ ಆತ್ಮಹತ್ಯೆಗಳು ನಡೆಯುತ್ತಿದ್ದರೂ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನ್‌ಕಿ ಬಾತ್, ವಿದೇಶಿ ಪ್ರವಾಸ ಎಂದು ಕಾಲಹರಣ ಮಾಡುತ್ತಿದ್ದಾರೆ. ಹೀಗಾಗಿ ಇದೆಲ್ಲದಕ್ಕೂ ಪರಿಹಾರ ಕಂಡುಕೊಳ್ಳಲು ಜನಾಂದೋಲನ ಮಹಾಮೈತ್ರಿ ರಚಿಸಲಾಗಿದ್ದು, ರೈತರ ಸಮಸ್ಯೆಗಳ ಸಮಗ್ರ ಚರ್ಚೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಬೇಕು. ಸಾಲಮನ್ನಾ ಮಾಡಬೇಕು. ಆತ್ಮಹತ್ಯೆ ತಡೆಗಟ್ಟಿ ರೈತರಿಗಾಗಿರುವ ಐತಿಹಾಸಿಕ ಅನ್ಯಾಯಕ್ಕೆ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶಾಸಕ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ, ಸ್ವರಾಜ್ ಅಭಿಯಾನ್ ಅಧ್ಯಕ್ಷ ದೊಡ್ಡಿಪಾಳ್ಯ ನರಸಿಂಹಮೂರ್ತಿ, ಕರ್ನಾಟಕ ಜನಶಕ್ತಿಯ ವಾಸು, ನೂರ್ ಶ್ರೀಧರ್, ಗಂಗಾಧರ್, ಬಡಗಲಪುರ ನಾಗೇಂದ್ರ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

 

Leave a Reply

comments

Related Articles

error: