ದೇಶಪ್ರಮುಖ ಸುದ್ದಿಮೈಸೂರು

ಉಗ್ರ ತರಬೇತಿ ಕ್ಯಾಂಪ್‍ಗಳಿಂದ ಬದುಕು ನರಕವಾಗಿದೆ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆಗಿಳಿದ ನಾಗರಿಕರು

ಗಿಲ್ಗಿಟ್‍ : ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಉಗ್ರ ತರಬೇತಿ ಕ್ಯಾಂಪ್‍ಗಳಿಂದಾಗಿ ತಮ್ಮ ಬದುಕು ನರಕವಾಗಿದೆ ಎಂದು ಅಲ್ಲಿನ ಜನರು ಪ್ರತಿಭಟನೆ ಆರಂಭಿಸಿದ್ದಾರೆ.

ಈ ಶಿಬಿರಗಳಿಂದಾಗಿ ಜನಜೀವನದ ಮೇಲೆ ನಕಾರಾತ್ಮಕ ಪರಿಣಾಮ ಹೆಚ್ಚಾಗಿದ್ದು, ತಕ್ಷಣವೇ ಈ ಶಿಬಿರಗಳನ್ನು ನಾಶಪಡಿಸಬೇಕು ಎಂದು ಮುಝಫರಾಬಾದ್, ಕೋಟ್ಲಿ, ಚಿನಾರಿ, ಮೀರ್ಪುರ್‍, ಗಿಲ್ಗಿಟ್, ದಿಯಾಮೆರ್ ಮತ್ತು ನೀಲಮ್ ಕಣಿವೆ ಜನರು ಪ್ರತಿಭಟನೆ ವೇಳೆ ಆಗ್ರಹಿಸಿದ್ದಾರೆ.

“ನಮ್ಮದೇ ಪ್ರದೇಶದಲ್ಲಿ ನಮ್ಮದೇ ಬದುಕನ್ನು ದುರ್ಭರಗೊಳಿಸುತ್ತಿರುವ ಉಗ್ರರ ನೆಲೆಗಳನ್ನು ನಾಶಪಡಿಸಬೇಕು. ಉಗ್ರರನ್ನು ಸಂಪೂರ್ಣ ನಿರ್ಮೂಲನ ಮಾಡದಿದ್ದರೆ ನಮ್ಮ ಜೀವನ ಸುಧಾರಿಸಲು ಸಾಧ್ಯವೇ ಸಾಧ್ಯವಿಲ್ಲ” ಎಂಬುದು ಪ್ರತಿಭಟನಾಕಾರರ ಆತಂಕದ ಧ್ವನಿ. ಪರಿಸ್ಥಿತಿ ಹೀಗೇ ಮುಂದುವರಿದರೆ ನಾಗರಿಕರೇ ಶಸ್ತ್ರಾಸ್ತ್ರ ಹಿಡಿಯುವ ಪರಿಸ್ಥಿತಿ ಬರಬಹುದು ಎಂಬುದು ಮತ್ತೋರ್ವ ಪ್ರತಿಭಟನಾಕಾರರಿಂದ ವ್ಯಕ್ತವಾದ ಆಕ್ರೋಶದ ನುಡಿಗಳು.

ಭಾರತೀಯ ಸೇನೆ ಗಡಿಯಲ್ಲಿ ಕದನವಿರಾಮ ಉಲ್ಲಂಘಿಸುತ್ತಿದೆಯೆಂದು ಕಳೆದ ವಾರವಷ್ಟೇ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ವಿಶ್ವಸಂಸ್ಥೆಯಲ್ಲಿ ಆರೋಪಿಸಿದ್ದರು. ಪಾಕ್‍ ಆಕ್ರಮಿತ ಕಾಶ್ಮೀರದ ನಾಗರಿಕರಿಂದ ಆರಂಭವಾಗಿರುವ ಈ ಪ್ರತಿಭಟನೆಗಳು ಪಾಕಿಸ್ತಾನದ ಮುಖವಾಡವನ್ನು ಕಳಚಿದ್ದು, ವಿಶ್ವ ಸಮುದಾಯದ ಮುಂದೆ ಪಾಕಿಸ್ತಾನ ಇಷ್ಟುದಿನ ಆಡುತ್ತಿದ್ದ ನಾಟಕ ಬಯಲಾದಂತಾಗಿದೆ.

Leave a Reply

comments

Related Articles

error: