ಪ್ರಮುಖ ಸುದ್ದಿಮೈಸೂರು

ಜೂ.11ಕ್ಕೆ ಬಿಜೆಪಿಯಿಂದ ಮೈಸೂರು ಜಿಲ್ಲಾ ಜನಸಂಪರ್ಕ ಅಭಿಯಾನ

ಮೈಸೂರು, ಜೂ.9 : ಭಾರತೀಯ ಜನತಾ ಪಕ್ಷ ಮೈಸೂರು ನಗರ ಮತ್ತು ಗ್ರಾಮಾಂತರದ ವತಿಯಿಂದ  ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಜಿಲ್ಲೆಯ ಜನಸಂಪರ್ಕ ಅಭಿಯಾನ ಪ್ರವಾಸ ಕಾರ್ಯಕ್ರಮವನ್ನು ಜೂ. 11 ರಂದು ಹಮ್ಮಿಕೊಂಡಿದೆ ಎಂದು ಬಿಜೆಪಿ ನಗರಾಧ್ಯಕ್ಷ  ಹಾಗೂ ಮಾಜಿ ಸಚಿವ ಕೋಟೆ ಶಿವಣ್ಣ ತಿಳಿಸಿದರು.

ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9 ಗಂಟೆಗೆ ವೀರನಗೆರೆ ಎಫ್.ಟಿ.ಎಸ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪತ್ರಿಮೆಗೆ ಬಿ.ಎಸ್.ಯಡಿಯೂರಪ್ಪ ಅವರು ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.  9.30ಕ್ಕೆ  ದಲಿತ ಸಮುದಾಯದ ಕುರಿಮಂಡಿ ಕೆಸರೆ ನರಸಿಂಹಮೂರ್ತಿ ಮನೆಯಲ್ಲಿ ಉಪಹಾರ ಸೇವಿಸಲಿದ್ದಾರೆ. ನಂತರ 10 ಗಂಟೆಗೆ ಕುರಿಮಂಡಿ ಮೈದಾನದಲ್ಲಿ ದಲಿತ ಬಂಧುಗಳ ಜೊತೆ ಸಂವಾದ ಹಾಗೂ ಸಭೆ ನಡೆಸಲಿದ್ದು,  11 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪಿಂಜ್ರಾಪೋಲ್ ಗೋ ಶಾಲೆಗೆ ಭೇಟಿ ನೀಡಿ ಗೋವುಗಳಿಗೆ ಮೇವು ವಿತರಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಬರ ಪೀಡಿತ ಪ್ರದೇಶ ಇಲವಾಲ ಹೋಬಳಿಯ ಶೆಟ್ಟನಾಯಕನಹಳ್ಳಿ ಭೇಟಿ, ವೀಕ್ಷಣೆ ಮತ್ತು ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ 1.30ಕ್ಕೆ ಇಲವಾಲದಲ್ಲಿರುವ ಚಿದಂಬರ ಅವರ ಮನೆಯಲ್ಲಿ ಭೋಜನ ನಂತರ 3ಕ್ಕೆ ಗಂಟೆಗೆ ಹುಣಸೂರಿನ ಪುರಸಭಾ ಮೈದಾನದಲ್ಲಿ ಜನಸಂಪರ್ಕ ಅಭಿಯಾನ ಹಾಗೂ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ಸಭೆಯಲ್ಲಿ 15 ಸಾವಿರ ಮಂದಿ ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಅದೇ ದಿನ ಸಂಜೆ 6 ಗಂಟೆಗೆ ಪ್ರಮುಖ ಕಾರ್ಯಕರ್ತರ ಸಭೆಯನ್ನು ಮೈಸೂರಿನ ಜೆ.ಕೆ.ಮೈದಾನದಲ್ಲಿರುವ ಅಮೃತ ಮಹೋತ್ಸವ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಬಿಜೆಪಿ ವರಿಷ್ಠ  ಅರವಿಂದ ಲಿಂಬಾವಳಿ, ಸಂಸದೆ ಶೋಭಾ ಕರಂದ್ಲಾಜೆ,  ಸಂಸದ ಪ್ರತಾಪ್ ಸಿಂಹ, ವಿಜಯಶಂಕರ್, ಮಾಜಿ ಸಚಿವ ಎಸ್.ಎ.ರಾಮದಾಸ್ ಸೇರಿದಂತೆ ರಾಜ್ಯದ ಪ್ರಮುಖ ಮುಖಂಡರು ಪಾಲ್ಗೊಳ್ಳಲಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ನಾಲ್ಕು ವರ್ಷದ ಆಡಳಿತ ವೈಫಲ್ಯ, ಭೀಕರ ಬರಗಾಲ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ, ರೈತ ಸಾಲ ಮನ್ನಾ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಲಾಗುವುದು ಎಂದರು.

ಮುಖ್ಯಮಂತ್ರಿ ಮತ್ತು ಉಸ್ತುವಾರಿ ಸಚಿವರ ಪುತ್ರರಾದ ಡಾ.ಯತೀಂದ್ರ ಹಾಗೂ ಸುನೀಲ್ ಬೋಸ್ ಅವರು ಸರ್ಕಾರದ ಪರವಾಗಿ ಗುದ್ದಲಿ ಪೂಜೆ, ಉದ್ಘಾಟನಾ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದು ಇವರಿಗೆ ಸರ್ಕಾರಿ ಅಧಿಕಾರಿಗಳು ಕೈಜೋಡಿಸಿರುವುದು ಸರಿಯಲ್ಲ. ಇವರ ದರ್ಬಾರಿಗೆ ಕಡಿವಾಣ ಹಾಕುವವರು ಇಲ್ಲವೇ ಎಂದು ಅಸಮಾಧಾನ ತೋರಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಎಚ್.ವಿ.ರಾಜೀವ್, ರಾಜೇಶ್, ಬೋರೇಗೌಡ, ಸತೀಶ್ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್, ಎಲ್.ಜಿ)

Leave a Reply

comments

Related Articles

error: